ಬುಡಾಪೆಸ್ಟ್: ಭಾರತ ಪುರುಷರ 4X400 ಮೀ. ರಿಲೇ ತಂಡವು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿ ಅಮೋಘ ಸಾಧನೆ ಮಾಡಿದೆ. ಈ ಹಾದಿಯಲ್ಲಿ ಏಷ್ಯನ್ ದಾಖಲೆಯನ್ನೂ ಮುರಿದಿದೆ. ಕಳೆದ ವರ್ಷ ನಡೆದ ಸ್ಫರ್ಧೆಯಲ್ಲಿ 2:59:51 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಜಪಾನ್ ರಿಲೇ ತಂಡ ಅತಿ ಕಡಿಮೆ ಸಮಯದಲ್ಲಿ ಗುರಿ ಮುಟ್ಟಿದ ಏಷ್ಯನ್ ತಂಡ ಎಂಬ ದಾಖಲೆ ಬರೆದಿತ್ತು. ನಂತರ ಜಪಾನ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ನಿರ್ಮಿಸಿದ್ದ 3:00:25 ಸೆಕೆಂಡುಗಳ ದಾಖಲೆಯನ್ನು ಅಳಿಸಿ ಹಾಕಿತ್ತು.
ಶನಿವಾರ ನಡೆದ ಅರ್ಹತಾ ಹಂತದಲ್ಲಿ ಮೊದಲ ಹೀಟ್‌ನಲ್ಲಿ ಓಡಿದ ಮೊಹಮ್ಮದ್ ಅನಾಸ್ ಯಹ್ಯಾ, ಅಮೋಜ್ ಜೇಕಬ್, ಮೊಹಮ್ಮದ್ ಅಜ್ಮಲ್ ಮತ್ತು ರಾಜೇಶ್ ರಮೇಶ್ ಅವರನ್ನೊಳಗೊಂಡ ಭಾರತದ ತಂಡ 2:59:05 ಸೆಕೆಂಡುಗಳೊಂದಿಗೆ ಗುರಿ ತಲುಪಿತು. ಮೊದಲ ಹೀಟ್‌ನಲ್ಲಿ ಅಮೆರಿಕ (2:58:47 ಸೆ) ಬಳಿಕ ಎರಡನೇ ಸ್ಥಾನ ಗಳಿಸಿತು. ಭಾರತದ ರಿಲೇ ತಂಡ ಜಪಾನ್ ತಂಡದ (2:59:51 ಸೆ) ಹೆಸರಿನಲ್ಲಿದ್ದ ಏಷ್ಯನ್ ದಾಖಲೆ ಮುರಿಯಿತು. ಈ ಹಿಂದಿನ ರಾಷ್ಟ್ರೀಯ ದಾಖಲೆ 3:0:25 ಸೆಕೆಂಡು ಆಗಿತ್ತು. ಭಾರತ ತಂಡ ಒಟ್ಟಾರೆಯಾಗಿ 2ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದೆ. ಬ್ರಿಟನ್ (2:59:42 ಸೆ) ಮತ್ತು ಜಮೈಕಾ (2:59:82) ತಂಡಗಳಿಗಿಂತ ಉತ್ತಮ ಸಮಯ ಕಂಡುಕೊಂಡಿತು.
ಇತಿಹಾಸ ಸೃಷ್ಟಿಸಿದ ಭಾರತ:ಟೋಕಿಯೊ ಒಲಿಂಪಿಕ್ಸ್‌ನ 4×400 ಮೀಟರ್ ರಿಲೇ ರೇಸ್‌ನಲ್ಲಿ ಭಾರತ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಆದರೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ರಚಿಸಿದೆ. ಭಾರತ ತನ್ನ ಹೀಟ್‌ನಲ್ಲಿ 2ನೇ ಸ್ಥಾನ ಗಳಿಸಿ, ಫೈನಲ್‌ಗೆ ಲಗ್ಗೆ ಇಟ್ಟಿದೆ. ಅಮೆರಿಕ ಮೊದಲ ಸ್ಥಾನದಲ್ಲಿ ರೇಸ್ ಮುಗಿಸಿದರೆ, ಬ್ರಿಟನ್ 3ನೇ ಸ್ಥಾನ ಗಳಿಸಿತು. ಓಟದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಕೇವಲ 1 ಸೆಕೆಂಡ್‌ಗಳ ಅಂತರವಿತ್ತು. ಅಮೆರಿಕ ತನ್ನ ಓಟವನ್ನು 2:58:47 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರೆ, ಬ್ರಿಟನ್ 2:59:42 ಸಮಯ ತೆಗೆದುಕೊಂಡಿತು.
ಮೊದಲ ಬಾರಿಗೆ ಫೈನಲ್‌ಗೆ ಅರ್ಹತೆ: ಅರ್ಹತಾ ಸುತ್ತಿನಲ್ಲಿ ಭಾರತದ ಮೊಹಮ್ಮದ್ ಅನಾಸ್ ಓಟವನ್ನು ಆರಂಭಿಸಿದರು. ಅವರ ಆರಂಭ ನಿಧಾನವಾಗಿತ್ತು. ಇದರ ಪರಿಣಾಮ ಮೊದಲ 100 ಮೀ. ಓಟದ ನಂತರ ಭಾರತ 6ನೇ ಸ್ಥಾನದಲ್ಲಿ ನಿಂತಿತು. ಆ ಬಳಿಕ ಮುಂದಿನ 100 ಮೀ.ಗಳಲ್ಲಿ ಭಾರತ ಅಷ್ಟೇ ಅದ್ಭುತ ಶೈಲಿಯಲ್ಲಿ ಪುನರಾಗಮನ ಮಾಡಿತು. ಅಮೋಜ್ ಜೇಕಬ್ ಅವರ ವೇಗದ ಓಟದಿಂದ ಭಾರತ 2ನೇ ಸ್ಥಾನಕ್ಕೇರಿತು. ಬಳಿಕ ಮುಹಮ್ಮದ್ ಅಜ್ಮಲ್ ಮತ್ತು ಅಂತಿಮವಾಗಿ ಅಮೋಜ್ ಜೇಕಬ್ ನೀಡಿದ ಮುನ್ನಡೆಯನ್ನು ರಾಜೇಶ್ ರಮೇಶ್ ಉಳಿಸಿಕೊಂಡರು. ಕೊನೆಯ ಕ್ಷಣದಲ್ಲಿ ಭಾರತ ಅಮೆರಿಕವನ್ನು ಸೋಲಿಸಲು ಯತ್ನಿಸಿತು, ಆದರೆ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಭಾರತ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ಇಂದು ಫೈನಲ್ ನಡೆಯಲಿದೆ.
ಇದನ್ನೂ ಓದಿ:ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್: ಹೆಚ್.ಎಸ್.ಪ್ರಣಯ್ಗೆ ಕಂಚು