ಬುಡಾಪೆಸ್ಟ್ (ಹಂಗೇರಿ):ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023ರ 7ನೇ ದಿನ ಜಮೈಕಾದ ಶೆರಿಕಾ ಜಾಕ್ಸನ್ 200 ಮೀಟರ್ ಓಟದಲ್ಲಿ ದಾಖಲೆ ಬರೆದಿದ್ದಾರೆ. 21.41 ಸೆಕೆಂಡ್ನಲ್ಲಿ 200 ಮೀಟರ್ ಓಟವನ್ನು ಪೂರೈಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 1988ರ ಸಿಯೋಲ್ ಒಲಿಂಪಿಕ್ಸ್‌ನಲ್ಲಿ ಫ್ಲಾರೆನ್ಸ್ ಗ್ರಿಫಿತ್-ಜಾಯ್ನರ್ ಅವರು 21.34 ಸೆಕೆಂಡ್ನಲ್ಲಿ 200 ಮೀಟರ್ ಓಟವನ್ನು ಪೂರ್ಣಗೊಳಿಸಿ ಅತಿ ವೇಗದ ದಾಖಲೆ ಬರೆದಿದ್ದರು. ಶೆರಿಕಾ ಜಾಕ್ಸನ್ .07 ಸೆಕೆಂಡ್ಗಳ ಮೊದಲ ವಿಜಯದ ಗೆರೆ ದಾಟಿದ್ದರೆ 35 ವರ್ಷದ ಹಿಂದಿನ ಈ ದಾಖಲೆ ಬ್ರೇಕ್ ಆಗುತ್ತಿತ್ತು.
ಅಮೆರಿಕಾದ ಗ್ಯಾಬಿ ಥಾಮಸ್ 21.81 ಸೆಕೆಂಡ್ಗೆ ಓಡಿ ಬೆಳ್ಳಿ ಪದಕ ಗೆದ್ದುಕೊಂಡರು. ಸೋಮವಾರದ 100 ಮೀಟರ್ ಓಟದಲ್ಲಿ ಪ್ರಶಸ್ತಿ ಗೆದ್ದಿದ್ದ ಶಾಕಾರಿ ರಿಚರ್ಡ್‌ಸನ್ 21.92 ಸೆಕೆಂಡ್ನಿಂದ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.
ನೋಹ್ ಲೈಲ್ಸ್ ಪುರುಷರ 200 ಮೀ ಓಟದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದರು . 100 ಮೀ ಓಟದ ನಂತರ ಬುಡಾಪೆಸ್ಟ್‌ನಲ್ಲಿ ತಮ್ಮ ಎರಡನೇ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದರು. 26ರ ಹರೆಯದ ನೋಹ್ ಲೈಲ್ಸ್ 19.52 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಎರಿಯಾನ್ ನೈಟನ್ 19.75 ಸೆಕೆಂಡುಗಳಲ್ಲಿ ಎರಡನೇ ಸ್ಥಾನ ಪಡೆದರೆ, ಲೆಟ್ಸೈಲ್ ಟೆಬೊಗೊ ಅವರು 19.81 ಸೆಕೆಂಡುಗಳಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.