ಬರ್ಲಿನ್ (ಜರ್ಮನಿ): ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮತ್ತೆರಡು ಚಿನ್ನದ ಪದಕ ಗೆದ್ದುಕೊಂಡಿದೆ. ಅದಿತಿ ಗೋಪಿಚಂದ್ ಸ್ವಾಮಿ ಮತ್ತು ಓಜಸ್ ಪ್ರವೀಣ್ ಡಿಯೋಟಾಲೆ ವೈಯಕ್ತಿಕ ಕಾಂಪೌಂಡ್ ಆರ್ಚರಿಯಲ್ಲಿ ಚಿನ್ನಕ್ಕೆ ಗುರಿಯಿಟ್ಟು ಯಶಸ್ವಿಯಾದರು. ಈ ವಾರ ಆರ್ಚರಿಯಲ್ಲಿ ಭಾರತ ಸತತವಾಗಿ ಪದಕಗಳನ್ನು ಮುಡಿಗೇರಿಸಿಕೊಂಡಿದೆ.
ಇಂದು ಚಾಂಪಿಯನ್‌ಶಿಪ್ ಮುಕ್ತಾಯದ ವೇಳೆಗೆ ಭಾರತ 3 ಚಿನ್ನ, 9 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 14 ಪದಕಗಳನ್ನು ಗೆದ್ದುಕೊಂಡಿತು. ಇದು ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅತ್ಯುತ್ತಮ ಪದಕ ಸಾಧನೆ. 1931ರಲ್ಲಿ ಚಾಂಪಿಯನ್‌ಶಿಪ್ ಆರಂಭವಾದಾಗಿನಿಂದ ಭಾರತಕ್ಕೆ ಚಿನ್ನ ಒಲಿದು ಬಂದಿರಲಿಲ್ಲ.
ಪುರುಷರ ವೈಯಕ್ತಿಕ ಕಂಪೌಂಡ್ ಬಿಲ್ಲುಗಾರಿಕೆಯಲ್ಲಿ ಓಜಸ್ ಪೋಲೆಂಡ್‌ನ ಎದುರಾಳಿ ಲುಕಾಸ್ಜ್ ಪ್ರಝಿಬಿಲ್ಸ್ಕಿ ಅವರನ್ನು 150 -149 ಅಂಕಗಳಿಂದ ಮಣಿಸಿದರು. ಈ ಮೂಲಕ ಓಜಸ್ ಪ್ರವೀಣ್ ಡಿಯೋಟಾಲೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಪುರುಷ ಬಿಲ್ಲುಗಾರ ಎಂದು ಇತಿಹಾಸ ನಿರ್ಮಿಸಿದರು.
"ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ. ಖೆಲೋಇಂಡಿಯಾ ಅಥ್ಲೀಟ್ ಓಜಸ್ ಪ್ರವೀಣ್ ಡಿಯೋಟಾಲೆ ಅವರು ಪೋಲೆಂಡ್‌ನ ಲುಕಾಸ್ಜ್ ಪ್ರಝಿಬಿಲ್ಸ್ಕಿಯನ್ನು 150-149 ಅಂಕಗಳೊಂದಿಗೆ ಸೋಲಿಸಿ ಇತಿಹಾಸ ಸೃಷ್ಟಿಸಿದರು" ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಟ್ವೀಟ್ ಮಾಡಿದೆ.
17 ವರ್ಷ ವಯಸ್ಸಿನ 6ನೇ ಶ್ರೇಯಾಂಕಿತ ಅದಿತಿ ಗೋಪಿಚಂದ್ ಸ್ವಾಮಿ ಫೈನಲ್‌ನಲ್ಲಿ ಮೆಕ್ಸಿಕೊದ ಆಂಡ್ರಿಯಾ ಬೆಸೆರಾ ಅವರನ್ನು 149-147 ಅಂಕಗಳಿಂದ ಸೋಲಿಸಿ ಚಿನ್ನಕ್ಕೆ ಮುತ್ತಿಕ್ಕಿದರು. ಹಿರಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ಸ್ಪರ್ಧೆ ಗೆದ್ದ ಅತ್ಯಂತ ಕಿರಿಯ ಬಿಲ್ಲುಗಾರ್ತಿ ಎಂಬ ಖ್ಯಾತಿಗೂ ಪಾತ್ರರಾದರು. 18 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಮತ್ತು ವಿಶ್ವ ದಾಖಲೆ ಹೊಂದಿರುವ ಅದಿತಿ ಗೋಪಿಚಂದ್ ಸ್ವಾಮಿ ಸೆಮಿಫೈನಲ್‌ನಲ್ಲಿ 149-145 ರಿಂದ ಎರಡನೇ ಶ್ರೇಯಾಂಕದ ಭಾರತದ ಜ್ಯೋತಿ ಸುರೇಖಾ ವೆನ್ನಮ್‌ರನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು. ಎರಡನೇ ಶ್ರೇಯಾಂಕಿತೆ ಜ್ಯೋತಿ ಸುರೇಖಾ ವೆನ್ನಮ್ ಕಂಚು ಗೆದ್ದುಕೊಂಡರು.
ಶುಕ್ರವಾರ ನಡೆದ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವನಿತೆಯರ ತಂಡ ಚಿನ್ನವನ್ನು ಗೆದ್ದಿತ್ತು. ಜ್ಯೋತಿ ಸುರೇಖಾ ವೆನ್ನಮ್, ಪರ್ನೀತ್ ಕೌರ್ ಮತ್ತು ಅದಿತಿ ಗೋಪಿಚಂದ್ ಸ್ವಾಮಿ ಭಾರತೀಯ ತಂಡದಲ್ಲಿದ್ದು, ಫೈನಲ್‌ನಲ್ಲಿ ಮೆಕ್ಸಿಕೋದ ಡಾಫ್ನೆ ಕ್ವಿಂಟೆರೊ, ಅನಾ ಸೋಫಾ ಹೆರ್ನಾಂಡೆಜ್ ಜಿಯೋನ್ ಮತ್ತು ಆಂಡ್ರಿಯಾ ಬೆಸೆರಾ ಅವರನ್ನು 235 - 229 ಅಂಕಗಳಿಂದ ಮಣಿಸಿದ್ದರು.
ಭಾರತದಿಂದ ಆರ್ಚರಿ ರಿಕರ್ವ್ ಸ್ಪರ್ಧೆಯಲ್ಲಿ ಯಾವುದೇ ಆಟಗಾರರೂ ಪ್ರಶಸ್ತಿ ಸುತ್ತಿಗೆ ಆಯ್ಕೆ ಆಗಲಿಲ್ಲ. ಇದರಿಂದಾಗಿ 2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ನಲ್ಲಿ ಭಾರತ, ಆರ್ಚರಿಯಲ್ಲಿ ತನ್ನ ಕೋಟಾ ಉಳಿಸಿಕೊಂಡಿಲ್ಲ. ಒಲಿಂಪಿಕ್ನಲ್ಲಿ ರಿಕರ್ವ್ ಆರ್ಚರಿಯನ್ನು ಮಾತ್ರ ಆಡಿಸಲಾಗುತ್ತದೆ. ಆರ್ಚರಿ ವಿಭಾಗದಲ್ಲಿ ಪ್ಯಾರಿಸ್ 2024 ಒಲಿಂಪಿಕ್ಗೆ ಇದು ಮೊದಲ ಅರ್ಹತಾ ಪಂದ್ಯವಾಗಿತ್ತು.
ಇದನ್ನೂ ಓದಿ:Archery Championships: ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ 'ಭಾರತೀ'ಯರಿಗೆ ಐತಿಹಾಸಿಕ ಚಿನ್ನ!