ಹ್ಯಾಂಗ್‌ಝೌ:ಸಮನ್ವಯ ಕೊರತೆ, ಒತ್ತಡ, ಪೆನಾಲ್ಟಿ ಕಾರ್ನರ್ ಬಿಟ್ಟುಕೊಟ್ಟ ಭಾರತ ಮಹಿಳಾ ಹಾಕಿ ತಂಡ ಏಷ್ಯನ್ ಗೇಮ್ಸ್ನ ಸೆಮಿಫೈನಲ್ ಪಂದ್ಯದಲ್ಲಿ ಚೀನಿ ಮಹಿಳೆಯರ ವಿರುದ್ಧ 0-4 ಗೋಲುಗಳ ಅಂತರದಿಂದ ಸೋಲು ಕಂಡಿತು. ಇದರಿಂದ ಮತ್ತೊಂದು ಚಿನ್ನ, ಬೆಳ್ಳಿ ಪದಕದಿಂದ ವಂಚಿತವಾಯಿತು. ಜೊತೆಗೆ ಪ್ಯಾರಿಸ್ ಒಲಿಂಪಿಕ್ಸ್ಗೆ ನೇರ ಪ್ರವೇಶದ ಅವಕಾಶವನ್ನೂ ತಪ್ಪಿಸಿಕೊಂಡಿತು.
ಕಳೆದ ಆವೃತ್ತಿಯ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ, ವಿಶ್ವದ ಏಳನೇ ಶ್ರೇಯಾಂಕದ ಭಾರತ ಮಹಿಳಾ ತಂಡ ಪಂದ್ಯಾವಳಿಯಲ್ಲಿ ಚಿನ್ನ ಗೆಲ್ಲುವ ಫೇವರೇಟ್ ತಂಡವಾಗಿತ್ತು. ಆದರೆ, ಸೆಮಿಫೈನಲ್‌ನಲ್ಲಿ 2018 ರ ಕಂಚಿನ ಪದಕ ವಿಜೇತ ಚೀನಾ ಎದುರು ಮುಗ್ಗರಿಸಿತು.
ಚೀನೀ ಮಹಿಳೆಯರ ಚುರುಕಿನ ಪ್ರದರ್ಶನ:ಆಕ್ರಮಣಕಾರಿ ಆಟವಾಡಿದ ಚೀನೀ ಮಹಿಳೆಯರು ಆರಂಭದಿಂದಲೇ ಭಾರತದ ರಕ್ಷಣಾ ವಿಭಾಗದ ಮೇಲೆ ಒತ್ತಡ ಹೇರಿತು. ಭಾರತದ ರಕ್ಷಣಾ ಗೋಡೆಯನ್ನು ಪದೇ ಪದೇ ಭೇದಿಸಿಕೊಂಡು ಬಂದ ಆಟಗಾರ್ತಿಯರು ಸತತ ಗೋಲು ದಾಖಲಿಸಿದರು. ಚೀನಾ ಪರವಾಗಿ ಜಿಯಾಕಿ ಜಾಂಗ್ (25ನೇ ನಿಮಿಷ), ಮೀರಾಂಗ್ ಝೌ (40ನೇ), ಮೆಯು ಲಿಯಾಂಗ್ (55ನೇ) ಮತ್ತು ಬಿಂಗ್ಫೆಂಗ್ಗು 60ನೇ ನಿಮಿಷದಲ್ಲಿ ಗೋಲು ಗಳಿಸಿದರು. ಪ್ರಯತ್ನಗಳ ನಡುವೆಯೂ ಭಾರತದ ಆಟಗಾರ್ತಿಯರು ಒಂದು ಗೋಲು ದಾಖಲಿಸಲು ವಿಫಲವಾದರು.
ಆಟ ಆರಂಭವಾದ 6 ನೇ ನಿಮಿಷದಲ್ಲಿ ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್ಗಳ ಅವಕಾಶ ಸಿಕ್ಕಿತು. ಆದರೆ, ತಂಡದ ನಾಯಕಿ ಸವಿತಾ ಅವುಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾದರು. 11ನೇ ನಿಮಿಷದಲ್ಲಿ ಚೀನಾ ಪೆನಾಲ್ಟಿ ಕಾರ್ನರ್‌ಗೆ ಅವಕಾಶ ನೀಡಿದಾಗಲೂ ಗೋಲು ಸಿಗಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲಿ ಚೀನಾ ಚುರುಕಿನ ಪ್ರದರ್ಶನ ನೀಡಿತು. ಇದರಿಂದ ಭಾರತದ ಮಿಡ್‌ಫೀಲ್ಡ್ ಮತ್ತು ಫಾರ್ವಡ್‌ಲೈನ್ ನಡುವೆ ಸಮನ್ವಯ ತಾಳತಪ್ಪಿತು.