ನವದೆಹಲಿ:ಭಾರತೀಯ ವನಿತೆಯರ ತಂಡ ಚೊಚ್ಚಲ ಜೂನಿಯರ್ ಹಾಕಿ ಏಷ್ಯಾ ಕಪ್ ಗೆದ್ದಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾ ತಂಡವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಜಪಾನ್‌ನ ಕಕಮಿಗಹರಾದಲ್ಲಿ ಭಾನುವಾರ ಭಾರತ ಮತ್ತು ದಕ್ಷಿಣ ಕೊರಿಯಾ ತಂಡಗಳ ನಡುವೆ ರೋಚಕ ಹಣಾಹಣಿಗೆ ಫೈನಲ್ ಪಂದ್ಯ ಸಾಕ್ಷಿಯಾಗಿತು. ಭಾರತ ಮಹಿಳಾ ತಂಡದ ಪರ 22ನೇ ನಿಮಿಷದಲ್ಲಿ ಅನ್ನು ಮತ್ತು 41ನೇ ನಿಮಿಷದಲ್ಲಿ ನೀಲಂ ತಲಾ ಒಂದು ಗೋಲು ಗಳಿಸಿದರು. ಕೊರಿಯಾ ಪರ 25ನೇ ನಿಮಿಷದಲ್ಲಿ ಏಕೈಕ ಗೋಲು ಸಿಯೋಯಾನ್ ಪಾರ್ಕ್ ಬಾರಿಸಿದರು.
ಪಂದ್ಯದ ಆರಂಭದ ನಿಮಿಷದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಗೆಲ್ಲುವ ಮೂಲಕ ಆಕ್ರಮಣಕಾರಿ ಆಟ ಆರಂಭಿಸಿತು. ಆದರೆ, ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವನಿತೆಯರು ವಿಫಲರಾದರು. ಇದೇ ವೇಳೆ ದಾಳಿ ಹಾಗೂ ಪ್ರತಿದಾಳಿ ನಡುವೆ ಚೆಂಡನ್ನು ನಿಯಂತ್ರಿಸುವ ಮೂಲಕ ಕೊರಿಯಾ ಆಟಗಾರ್ತಿಯರು ಆವೇಗವನ್ನು ತಮ್ಮ ಪರವಾಗಿ ತಿರುಗಿಸಿದರು. ಆರಂಭಿಕ ಪೆನಾಲ್ಟಿ ಕಾರ್ನರ್ ಅನ್ನು ಸಹ ಗೆದ್ದರು. ಮತ್ತೊಂದೆಡೆ, ನೀಲಂ ಗೋಲ್ಲೈನ್ ಕ್ಲಿಯರೆನ್ಸ್ ಮಾಡಿದರು. ಉಭಯ ತಂಡಗಳ ಆಕ್ರಮಣಕಾರಿ ಆಟದ ಹೊರತಾಗಿಯೂ ಮೊದಲ ಕ್ವಾರ್ಟರ್ ಗೋಲುರಹಿತವಾಗಿ ಕೊನೆಗೊಂಡಿತು.
ಎರಡನೇ ಕ್ವಾರ್ಟರ್ನಲ್ಲಿ ಕೊರಿಯಾ ತನ್ನ ಆಕ್ರಮಣಕಾರಿ ಆಟವನ್ನು ಮುಂದುವರೆಸಿತು. ಕೊರಿಯಾ ಕೂಡ ಕೆಲವು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡಿತು. ಆದರೆ ಭಾರತವು ಎದುರಾಳಿಗಳನ್ನು ಹಿಮ್ಮೆಟ್ಟಿಸಲು ಬಲವಾಗಿ ನಿಂತಿತು. ಅನ್ನು ಮೂಲಕ ಮುನ್ನಡೆ ಸಾಧಿಸುವ ಮೂಲಕ ಕೊರಿಯಾವನ್ನು ಒತ್ತಡಕ್ಕೆ ಸಿಲುಕಿಸಿತು. ಪೆನಾಲ್ಟಿ ಸ್ಟ್ರೋಕ್ಅನ್ನು ಶಾಂತವಾಗಿ ಗೋಲಾಗಿ ಪರಿವರ್ತಿಸಿದರು.
ಆದಾಗ್ಯೂ, ಭಾರತದ ಮುನ್ನಡೆಯು ಹೆಚ್ಚು ಕಾಲ ಉಳಿಯಲಿಲ್ಲ. ದಕ್ಷಿಣ ಕೊರಿಯಾದ ಸಿಯೋಯಾನ್ ಉತ್ತಮವಾದ ಹೊಡೆತದ ಮೂಲಕ ಗೋಲು ಗಳಿಸುವ ಮೂಲಕ ಸಮಬಲ ಸಾಧಿಸಿತು. ಆದರೆ, ಮೂರನೇ ಕ್ವಾರ್ಟರ್ನಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ನೀಲಂ ಅದ್ಭುತವಾಗಿ ಪರಿವರ್ತಿಸಿ ಭಾರತವನ್ನು ಮುನ್ನಡೆಸಿದರು. ಇದರಿಂದ ಭಾರತ ತಂಡದ 2-1 ಗೋಲುಗಳಿಂದ ಗೆಲುವು ಸಾಧಿಸಿತು.
ನಗದು ಬಹುಮಾನ ಘೋಷಣೆ:ಚೊಚ್ಚಲ ಜೂನಿಯರ್ ಹಾಕಿ ಏಷ್ಯಾ ಕಪ್ ಗೆದ್ದ ಭಾರತೀಯ ವನಿತೆಯರ ತಂಡಕ್ಕೆ ಹಾಕಿ ಇಂಡಿಯಾ ನಗದು ಬಹುಮಾನ ಘೋಷಿಸಿದೆ. ಆಟಗಾರ್ತಿಯರಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಹಾಕಿ ಇಂಡಿಯಾ ಹೇಳಿದೆ.
ಇದನ್ನೂ ಓದಿ:ಪಾಕ್ ಮಣಿಸಿ 4ನೇ ಬಾರಿಗೆ ಪುರುಷರ ಜೂನಿಯರ್ ಏಷ್ಯಾಕಪ್ ಹಾಕಿ ಗೆದ್ದ ಭಾರತ!