ರಾಂಚಿ:ಇಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವಿನ ಜೈತ್ರಯಾತ್ರೆಯನ್ನು ಮುಂದುವರಿಸಿರುವ ಭಾರತ ಮಹಿಳಾ ಹಾಕಿ ತಂಡ, ಮೂರನೇ ಪಂದ್ಯದಲ್ಲೂ ಗೆಲುವು ಸಾಧಿಸಿದೆ. ಚೀನಾ ವಿರುದ್ಧ ನಡೆದ ಪಂದ್ಯದಲ್ಲಿ ದೀಪಿಕಾ ಮತ್ತು ಸಲೀಮಾ ಟೆಟೆ ಅವರ ತಲಾ ಒಂದು ಗೋಲುಗಳ ನೆರವಿನಿಂದ 2-1 ಗೋಲುಗಳ ರೋಚಕ ಜಯ ದಾಖಲಿಸಿತು.
15ನೇ ನಿಮಿಷದಲ್ಲಿ ಭಾರತದ ದೀಪಿಕಾ ಗೋಲಿನ ಖಾತೆ ತೆರೆದರೆ, ಸಲೀಮಾ ಟೆಟೆ 26ನೇ ನಿಮಿಷದಲ್ಲಿ ಭಾರತಕ್ಕೆ ಮತ್ತೊಂದು ಮುನ್ನಡೆ ತಂದುಕೊಟ್ಟರು. ಚೀನಾದ ಪರವಾಗಿ ಏಕೈಕ ಗೋಲು ಜಿಯಾಕಿ ಜಾಂಗ್ ಅವರಿಂದ 41 ನೇ ನಿಮಿಷದಲ್ಲಿ ಬಂದಿತು.
ಜಿದ್ದಾಜಿದ್ದಿನ ಹೋರಾಟ:ಆರಂಭದಿಂದಲೂ ಇತ್ತಂಡಗಳು ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು. ಭಾರತದ ಮಹಿಳೆಯರು ರಕ್ಷಣೆಯ ಜೊತೆಗೆ ಆಕ್ರಮಣಕಾರಿ ಆಟವಾಡಿದರು. ಪಂದ್ಯದಲ್ಲಿ ಚೆಂಡಿನ ಮೇಲೆ ಅತಿ ಹೆಚ್ಚು ಹಿಡಿತ ಸಾಧಿಸಿದ ಭಾರತ ಮಹಿಳೆಯರು, ಚೀನಾದ ರಕ್ಷಣಾ ಗೋಡೆಯನ್ನು ಹಲವು ಬಾರಿ ಭೇದಿಸಿದರು.
ಮೊದಲ ಕ್ವಾರ್ಟರ್ನ ಕೊನೆಯ ನಿಮಿಷಗಳಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಆದರೆ, ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಎಡವಿತು. ಇದಾದ ಬಳಿಕ ಪೆನಾಲ್ಟಿ ಸ್ಟ್ರೋಕ್ ಸಿಕ್ಕಿತು. ಆಗ ಸ್ಟಿಕ್ ಕೈಗೆತ್ತಿಕೊಂಡ ದೀಪಿಕಾ ನಿಖರ ಗುರಿ ಸಾಧಿಸಿ, ಚೆಂಡನ್ನು ಗೋಲು ಸೇರಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ತಂದರು.
ಮೊದಲ ಗೋಲು ಬಿಟ್ಟುಕೊಟ್ಟ ನಂತರ ಎಚ್ಚೆತ್ತುಕೊಂಡ ಚೀನಾ ಮಹಿಳೆಯರು ಆಕ್ರಮಣಕಾರಿ ಆಟಕ್ಕೆ ಇಳಿದರು. ಗೋಲು ಗಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ, ಭಾರತದ ನಾಯಕಿ ಸವಿತಾ ತಡೆಗೋಡೆಯಾಗಿ ನಿಂತು ಚೀನಾದ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಿದರು. ಭಾರತದ ಮುನ್ನಡೆಯನ್ನು ಕಾಪಾಡಿದರು.