ವಿಂಬಲ್ಡನ್:ದಾಖಲೆಯ 24ನೇ ಗ್ರ್ಯಾಂಡ್ಸ್ಲಾಂ ಮೇಲೆ ಕಣ್ಣಿಟ್ಟಿರುವ ನೊವಾಕ್ ಜೊಕೊವಿಕ್ ಮತ್ತು ಫ್ರೆಂಚ್ ಓಪನ್ ಚಾಂಪಿಯನ್ ಹಾಗು ವಿಶ್ವದ ನಂಬರ್ 1 ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರು ಪ್ರತಿಷ್ಟಿತ ವಿಂಬಲ್ಡನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ನೇರ ಸೆಟ್ಗಳಿಂದ ಗೆದ್ದು ಶುಭಾರಂಭ ಮಾಡಿದ್ದಾರೆ. ಇಬ್ಬರ ಸೊಗಸಾದ ಆಟಕ್ಕೆ ಮಳೆ ಅಡ್ಡಿಪಡಿಸಿದ್ದು, ಕೊಂಚ ನಿರಾಸೆ ತಂದಿತು.
ಮಳೆ ಅಡ್ಡಿ ಮಧ್ಯೆಯೇ ವಿಶ್ವದ 2ನೇ ಶ್ರೇಯಾಂಕಿತ ಸರ್ಬಿಯಾದ ಜೊಕೊವಿಕ್ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮ್ಯಾರಥಾನ್ನಲ್ಲಿ ಪೆಡ್ರೊ ಕ್ಯಾಚಿನ್ರನ್ನು 6-3, 6-3, 7-6 (4) ಸೆಟ್ಗಳಿಂದ ಸೋಲಿಸಿದರು. ಮೊದಲೆರಡು ಸೆಟ್ಗಳನ್ನು ನಿರಾಯಾಸವಾಗಿ ಗೆದ್ದ ನೊವಾಕ್ಗೆ ಮೂರನೇ ಸೆಟ್ನಲ್ಲಿ ಸವಾಲು ಎದುರಾಯಿತು. ಸುಲಭವಾಗಿ ಸೋಲೊಪ್ಪದೆ ತಿರುಗೇಟು ನೀಡಿದ ಪೆಡ್ರೊ ಮೂರನೇ ಸೆಟ್ನಲ್ಲಿ 6-6ರಲ್ಲಿ ಸಮಬಲ ಸಾಧಿಸಿದರು. ಇದರಿಂದ ಟೈ ಬ್ರೇಕರ್ ನಡೆಸಲಾಯಿತು.
ವಿಂಬಲ್ಡನ್ನಲ್ಲಿ ಸತತ 28 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ನೊವಾಕ್ ಟೈ ಬ್ರೇಕರ್ ಅನ್ನು 7-4 ರಲ್ಲಿ ಗೆಲ್ಲುವ ಮೂಲಕ ಗೆಲುವಿನ ಸಂಖ್ಯೆಯನ್ನು 29ಕ್ಕೆ ಹೆಚ್ಚಿಸಿಕೊಂಡರು. ಸಾರ್ವಕಾಲಿಕ ಪ್ರಶಸ್ತಿಗಳ ದಾಖಲೆ ಸೃಷ್ಟಿಸುವ ಹಾದಿಯಲ್ಲಿರುವ ಸರ್ಬಿಯಾ ಆಟಗಾರನ ಮುಂದೆ ಪೆಡ್ರೊ ಆಟ ಸಾಕಾಗಲಿಲ್ಲ. ಈಗಾಗಲೇ ಆಸ್ಟ್ರೇಲಿಯನ್, ಫ್ರೆಂಚ್ ಗ್ರ್ಯಾಂಡ್ಸ್ಲಾಂ ಗೆದ್ದಿರುವ ಜೊಕೊ ವಿಂಬಲ್ಡನ್ ಗೆದ್ದು ಈ ಋತುವಿನ ಎಲ್ಲ ಪ್ರಶಸ್ತಿ ಜಯಿಸುವ ಗುರಿ ಹೊಂದಿದ್ದಾರೆ.