ಲಂಡನ್: ಸೋಮವಾರ ನಡೆದ ವಿಂಬಲ್ಡನ್ ವುಮೆನ್ಸ್ ಸಿಂಗಲ್ಸ್ನ 16ನೇ ಘಟ್ಟದ ಸ್ಪರ್ಧೆಯಲ್ಲಿ ಓನ್ಸ್ ಜಬೇರ್, ಅರೀನಾ ಸಬಲೆಂಕಾ, ಮ್ಯಾಡಿಸನ್ ಕೀಸ್ ಮತ್ತು ಎಲೆನಾ ರೈಬಾಕಿನಾ ತಮ್ಮ ಎದುರಾಳಿಗಳನ್ನು ಮಣಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಮಾಜಿ ಚಾಂಪಿಯನ್ ಪೆಟ್ರಾ ಕ್ವಿಟೋವಾಗೆ ಶಾಕ್! : ಟ್ಯುನೀಶಿಯಾದ ಆರನೇ ಶ್ರೇಯಾಂಕಿತೆ ಓನ್ಸ್ ಜಬೇರ್ ಅವರು ಎರಡು ಬಾರಿ ವಿಂಬಲ್ಡನ್ ಮಾಜಿ ಚಾಂಪಿಯನ್ ಆಗಿದ್ದ ಪೆಟ್ರಾ ಕ್ವಿಟೋವಾ ಅವರನ್ನು ಸೋಲಿಸಿದರು. ಓನ್ಸ್ ಜಬೇರ್ 16ರ ಸುತ್ತಿನ ಹಣಾಹಣಿಯಲ್ಲಿ 6-0, 6-3ರಲ್ಲಿ ಜೆಕ್ ಗಣರಾಜ್ಯದ 9 ಶ್ರೇಯಾಂಕದ ಕ್ವಿಟೋವಾ ಅವರನ್ನು ಮಣಿಸಿದರು. ಕಳೆದ ವರ್ಷ ವಿಂಬಲ್ಡನ್‌ನಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್ ತಲುಪಿದ್ದ ಜಬೇರ್, ಕ್ವಿಟೋವಾ ಅವರೊಂದಿಗಿನ ಆರು ಮುಖಾಮುಖಿಯಲ್ಲಿ ಇದೀಗ ಎರಡನೇ ಗೆಲುವು ದಾಖಲಿಸಿದ್ದಾರೆ. ಕ್ವಿಟೋವಾ ಅವರನ್ನು ಸೋಲಿಸಿದ ನಂತರ ಜಬೇರ್ ಸತತ ಮೂರನೇ ವರ್ಷ ವಿಂಬಲ್ಡನ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿದರು.
ಜಬೇರ್ ಅವರ ಮುಂದಿನ ಪಂದ್ಯ ಅತ್ಯಂತ ಕುತೂಹಲಕಾರಿ ಆಗಿರಲಿದೆ. ಇವರು 2022ರ ವಿಂಬಲ್ಡನ್ ಫೈನಲ್ನಲ್ಲಿ ಎದುರಾಗಿದ್ದ ಎಲೆನಾ ರೈಬಾಕಿನಾ ವಿರುದ್ಧ ಕ್ವಾರ್ಟರ್‌ಫೈನಲ್ ಆಡುವುದೇ ಇದಕ್ಕೆ ಕಾರಣ. 2022ರ ಫೈನಲ್ಸ್ನಲ್ಲಿ ಜಬೇರ್‌ರನ್ನು ಎಲೆನಾ ರೈಬಾಕಿನಾ 3-6, 6-2, 6-2ರ ಸೆಟ್ನಿಂದ ಪರಾಭವಗೊಳಿಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಹೀಗಾಗಿ ನಾಳೆ ನಡೆಯುವ ಮುಖಾಮುಖಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಪ್ರಶಸ್ತಿಯತ್ತ ಸಬಲೆಂಕಾ ಚಿತ್ತ: ಮತ್ತೊಂದು ಕೋರ್ಟ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡನೇ ಶ್ರೇಯಾಂಕಿತೆ ಅರೀನಾ ಸಬಲೆಂಕಾ ಅವರು ಎಕಟೆರಿನಾ ಅಲೆಕ್ಸಾಂಡ್ರೊವಾ ಅವರನ್ನು ಸೋಲಿಸಿ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡರು. ಒಂದನೇ ಕೋರ್ಟ್ನಲ್ಲಿ ಮುಖಾಮುಖಿಯಾಗಿದ್ದ ಎಕಟೆರಿನಾ ಅಲೆಕ್ಸಾಂಡ್ರೊವಾ ವಿರುದ್ಧ ಸಬಲೆಂಕಾ ಚೊಚ್ಚಲ ಜಯ ಸಾಧಿಸಿ ವಿಂಬಲ್ಡನ್ ಪ್ರಶಸ್ತಿಯತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಎಕಟೆರಿನಾ ಅಲೆಕ್ಸಾಂಡ್ರೊವಾ ವಿಶ್ವದ 2ನೇ ಶ್ರೇಯಾಂಕದ ಸೆಬಲೆಂಕಾಗೆ ಕಠಿಣ ತುತ್ತಾದರು. ಸತತ 71 ನಿಮಿಷಗಳ ಅವಧಿಯ ಬಿಗಿ ಹೋರಾಟದಲ್ಲಿ ಕೊನೆಗೂ ಸೆಬಲೆಂಕಾ ಮೇಲುಗೈ ಸಾಧಿಸಿಬಿಟ್ಟರು. ಎಕಟೆರಿನಾ 6-4, 6-0ಯ ಸೆಟ್ಗಳ ಹೋರಾಟದಿಂದ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು.