ಲಂಡನ್ :ವಿಂಬಲ್ಡನ್ 2023ರ ಟೆನಿಸ್ ಟೂರ್ನಿಯಲ್ಲಿ ಬುಧವಾರ ನಡೆದ ಮೂರನೇ ದಿನದ ಪಂದ್ಯದಲ್ಲಿ ರಷ್ಯಾದ 3ನೇ ಶ್ರೇಯಾಂಕಿತ ಆಟಗಾರ ಡೇನಿಯಲ್ ಮೆಡ್ವೆಡೆವ್ ಅವರು ಬ್ರಿಟನ್ ಯುವ ಆಟಗಾರ ಆರ್ಥರ್ ಫೆರಿ ಅವರನ್ನು 7-5, 6-4, 6-3 ಸೆಟ್‌ಗಳಿಂದ ಪರಾಭವಗೊಳಿಸಿ ಎರಡನೇ ಸುತ್ತು ತಲುಪಿದರು. ಮೆಡ್ವೆಡೆವ್ ಅವರು ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಮ್‌ನ ಚೊಚ್ಚಲ ಆಟಗಾರ ಫೆರಿ ವಿರುದ್ಧ ವೃತ್ತಿಪರ ಪ್ರದರ್ಶನ ತೋರಿದರು. ಮಳೆಯಿಂದ 30 ನಿಮಿಷಗಳ ಕಾಲ ಪಂದ್ಯ ಸ್ಥಗಿತಗೊಂಡಿದ್ದು ಮೊದಲ ಸೆಟ್‌ನಲ್ಲಿ 5-5 ರಿಂದ ಇಬ್ಬರು ಆಟಗಾರರು ಸಮಾನ ಅಂಕ ಕಾಯ್ದುಕೊಂಡಿದ್ದರು. ಬಳಿಕ ಕಮ್ ಬ್ಯಾಕ್ ಮಾಡಿದ ಮೆಡ್ವೆಡೆವ್ ಪಂದ್ಯದಲ್ಲಿ ಹಿಡಿತ ಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದರು.
ಪಂದ್ಯದ ಬಳಿಕ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಅವರು, "ಕಳೆದ ಎರಡು ವರ್ಷಗಳಿಂದ ನಾನು ವಿಂಬಲ್ಡನ್ನಿಂದ ಹೊರಗುಳಿದಿದ್ದೆ. ಆದ ಕಾರಣ ಈ ಪಂದ್ಯದಲ್ಲಿ ಸ್ವಲ್ಪ ಹೆದರಿಕೆ ನನ್ನನ್ನು ಕಾಡಿತು. ಆದಾಗ್ಯೂ ವಿಂಬಲ್ಡನ್ನ ನಂ.1 ಕೋರ್ಟ್ನಲ್ಲಿ ಆಡಿದ್ದಕ್ಕೆ ಸಂತೋಷವಾಯಿತು" ಎಂದರು.
ಸೋಲಿನ ಹೊರತಾಗಿಯೂ, ಯುವ ಆಟಗಾರ ಫೆರಿ ತಮ್ಮ ಚೊಚ್ಚಲ ವಿಂಬಲ್ಡ್ ಟೂರ್ನಿಯಲ್ಲಿ ಪಂದ್ಯದುದ್ದಕ್ಕೂ ಭರವಸೆಯ ಪ್ರದರ್ಶನ ತೋರಿದರು. ವಿಶ್ವದ ನಂ.391 ಶ್ರೇಯಾಂಕಿತ 20 ವರ್ಷದ ಫೆರಿ ಅಲ್ಪಾವಧಿಯ ವೃತ್ತಿಜೀವನದಲ್ಲಿ ಅಗ್ರ ಶ್ರೇಯಾಂಕದ ಎದುರಾಳಿಗಳ ವಿರುದ್ಧ ಆಡಿದ ಅನುಭವವನ್ನು ಈಗಾಗಲೇ ಗಳಿಸಿದ್ದಾರೆ. ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಫೆರಿ, ಮೆಡ್ವೆಡೆವ್‌ಗೆ ಸವಾಲು ಹಾಕಲು ನಿರಂತರ ಅಭ್ಯಾಸ ಮಾಡಿ ಹಲವಾರು ಯೋಜನೆಗಳನ್ನು ರೂಪಿಸಿದ್ದರು. ಅಂತಿಮವಾಗಿ ಮಾಜಿ ವಿಶ್ವ ನಂ.1 ಆಟಗಾರನ ವಿರುದ್ಧ ಮಂಡಿಯೂರಿದರು. ಮೆಡ್ವೆಡೆವ್ ಎರಡನೇ ಸುತ್ತಿನ್ನಲ್ಲಿ ಮನ್ನಾರಿನೊ ಅಥವಾ ಅಲೆಕ್ಸಾಂಡರ್ ಶೆವ್ಚೆಂಕೊರನ್ನು ಎದುರಾಗಲಿದ್ದಾರೆ.
ಮತ್ತೊಂದೆಡೆ, ಯಾನಿಕ್ ಹ್ಯಾನ್‌ಫ್‌ಮನ್ ವಿರುದ್ಧ ಒಂಬತ್ತನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ 3-2 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದ ವೇಳೆ ಮಳೆಯಿಂದ ಪಂದ್ಯ ಅರ್ಧಕ್ಕೆ ರದ್ದುಗೊಂಡಿತ್ತು. ಹ್ಯಾನ್‌ಫ್‌ಮನ್ ವಿರುದ್ದ ಸೋಲಿನ ಭೀತಿಯಿಂದ ಹೊರಬಂದರು. ನಂತರ ಬುಧವಾರ ಜರ್ಮನ್ನ ಅಲೆಕ್ಸ್ ಮೊಲ್ಕನ್ ವಿರುದ್ಧದ ಪಂದ್ಯದಲ್ಲಿ ಟೇಲರ್ ಫ್ರಿಟ್ಜ್ ಭರ್ಜರಿ ಗೆಲುವು ದಾಖಲಿಸಿದರು. 25 ವರ್ಷದ ಟೇಲರ್, ಜರ್ಮನ್ ಅತ್ಯುತ್ತಮ ಆಟಗಾರ ಅಲೆಕ್ಸ್ ಮೊಲ್ಕನ್ ಅವರನ್ನು 6-3, 6-3, 6-4 ರಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಮೈಕೆಲ್ ಯೆಮರ್ ಅವರನ್ನು ಎದುರಿಸಲಿದ್ದಾರೆ.
ಏತನ್ಮಧ್ಯೆ, 2019ರ ನಂತರ ಮೊದಲ ಬಾರಿಗೆ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿರುವ ಮಿಲೋಸ್ ರಾವೊನಿಕ್, ಡೆನ್ನಿಸ್ ನೊವಾಕ್ ಅವರನ್ನು 6-7(5), 6-4, 7-6(5), 6-1 ಸೆಟ್‌ಗಳಿಂದ ಸೋಲಿಸಿ ಗೆಲುವು ಕಂಡರು.