ಲಂಡನ್: ವಿಶ್ವದ 4ನೇ ಶ್ರೇಯಾಂಕದ ರಾಫೆಲ್ ನಡಾಲ್ ಅರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರುಂಡೊಲೊ ಅವರನ್ನು ಮಣಿಸಿ 14ನೇ ಬಾರಿಗೆ ವಿಂಬಲ್ಡನ್ ಓಪನ್ ಟೆನ್ನಿಸ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಸೆಂಟರ್ ಕೋರ್ಟ್‌ನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರೆದುರು ಮೊದಲೆರಡು ಸೆಟ್ಗಳಲ್ಲಿ ಸರಾಗವಾಗಿ ಗೆದ್ದ ನಡಾಲ್ಗೆ ಮೂರನೇ ಸೆಟ್‌ನಲ್ಲಿ ಸೆರುಂಡೊಲೊ ತಿರುಗೇಟು ನೀಡಿದರು. 2019ರ ಬಳಿಕ ಮೊದಲ ಬಾರಿಗೆ ಹುಲ್ಲಿನ ಅಂಕಣಕ್ಕಿಳಿದಿರುವ ನಡಾಲ್, ಮೂರು ಗಂಟೆ 36 ನಿಮಿಷಗಳ ಕಾದಾಟದಲ್ಲಿ 6-4, 6-3, 3-6, 6-4 ಸೆಟ್ಗಳಿಂದ ಗೆದ್ದರು.
ವಿಂಬಲ್ಡನ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ ಫ್ರಾನ್ಸಿಸ್ಕೊ ಸೆರುಂಡೊಲೊ ಹಣಾಹಣಿಯ ಮಧ್ಯಭಾಗದಲ್ಲಿ ಪುನರಾಗಮನದ ಸುಳಿವು ನೀಡಿದರು. ಆದರೆ 36 ವರ್ಷದ ನಡಾಲ್ ನಾಲ್ಕನೇ ಸೆಟ್‌ನಲ್ಲಿ ಮೇಲುಗೈ ಸಾಧಿಸಿದರು. ಈ ಋತುವಿನಲ್ಲಿ 31-4ರ ಗೆಲುವಿನ ಸರಾಸರಿ ಹೊಂದಿರುವ ರಾಫೆಲ್ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದರು.
2022ರಲ್ಲಿ ಆಸ್ಟ್ರೇಲಿಯನ್ ಓಪನ್ ಹಾಗೂ ಫ್ರೆಂಚ್ ಓಪನ್ ಗೆದ್ದಿರುವ ನಡಾಲ್ ಮೊದಲ ಬಾರಿಗೆ ವರ್ಷದ ಸಾಧನೆ ಮಾಡಿದ್ದಾರೆ. ಇದೀಗ ವರ್ಷದ ಮೂರನೇ ಹಾಗೂ ಒಟ್ಟಾರೆ 23ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಎರಡನೇ ಸುತ್ತಿನಲ್ಲಿ ಲಿಥುಯೇನಿಯದ ರಿಕಾರ್ಡಾಸ್ ಬೆರಾಂಕಿಸ್ ಅವರನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ:ಅರ್ಜುನ್ ತೆಂಡೂಲ್ಕರ್ - ಡೇನಿಯೆಲ್ಲೆ ವ್ಯಾಟ್ ಫೋಟೊ ವೈರಲ್: ಲಿಟ್ಲ್ ಮೇಟ್ ಎಂದ ಮಹಿಳಾ ಆಟಗಾರ್ತಿ