ಟೋಕಿಯೋ: ಶುಕ್ರವಾರದಿಂದ ಒಲಿಂಪಿಕ್ಸ್ ಗೇಮ್ಸ್ ಆರಂಭವಾಗಲಿದ್ದು, ಭಾರತ ಕ್ರಿಕೆಟ್ನ ಲೆಜೆಂಡ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ಶುಭಕೋರಿದ್ದಾರೆ.
ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅರ್ಹತೆ ಪಡೆದವರ ಸಂಖ್ಯೆ 120ರ ಗಡಿ ದಾಟಿದೆ. ಹಲವಾರು ಕ್ರೀಡೆಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯರು ಸ್ಪರ್ಧಿಸುತ್ತಿದ್ದಾರೆ. ಕೋವಿಡ್ ಬಿಕ್ಕಟ್ಟಿನ ನಡುವೆಯೂ ನಾಳೆಯಿಂದ ಟೋಕಿಯೋದಲ್ಲಿ ಮಹಾಕ್ರೀಡಾಕೂಟ ಚಾಲನೆ ಪಡೆಯಲಿದೆ.
'ಪ್ರತಿಷ್ಠಿತ 'ಟೋಕಿಯೊ 2020' ಕ್ರೀಡಾಕೂಟದಲ್ಲಿ ಸ್ಥಾನ ಪಡೆದ ಟೀಮ್ ಇಂಡಿಯಾದ ಒಲಿಂಪಿಯನ್ನರನ್ನು ಅಭಿನಂದಿಸಲು ಬಯಸುತ್ತೇನೆ. ನೀವು ಈ ದಿನಕ್ಕಾಗಿ ಸಾಕಷ್ಟು ಕಠಿಣ ಪರಿಶ್ರಮವಹಿಸಿದ್ದೀರಿ, ಕೆಲವು ವರ್ಷಗಳಿಂದ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಸಾಕಷ್ಟು ತ್ಯಾಗಗಳನ್ನು ಮಾಡಿದ್ದೀರಾ. ಕೋವಿಡ್ನಂತಹ ಕಠಿಣ ಸಂದರ್ಭದಲ್ಲೂ ತರಬೇತಿ ಮಾಡಿದ್ದೀರಾ. ಆದರೆ ಈಗ ನಿಮ್ಮ ಕ್ಷಣ ಬಂದಿದೆ ಎಂದು ಸಚಿನ್ ಒಲಿಂಪಿಕ್ಸ್ ವೆಬ್‌ಸೈಟ್ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ತಿಳಿಸಿದ್ದಾರೆ.
"ಟೋಕಿಯೋದಲ್ಲಿ ಸ್ಪರ್ಧಿಸಲು ಸಿಕ್ಕಿರುವ ಈ ಅವಕಾಶವನ್ನು ನೀವೆಲ್ಲರೂ ಆನಂದಿಸುತ್ತೀರೆಂದು ಭಾವಿಸಿದ್ದೇನೆ. ಈ ಪ್ರಯಾಣದಲ್ಲಿ ನಾವೆಲ್ಲರೂ ಒಟ್ಟಾಗಿ ನಿಲ್ಲುತ್ತೇವೆ. ಪ್ರತಿಯೊಬ್ಬರಿಗೂ ನನ್ನ ಶುಭಾಶಯಗಳು. ಇಡೀ ರಾಷ್ಟ್ರವು ನಿಮ್ಮ ಜೊತೆಯಿದೆ" ಎಂದು ಕ್ರಿಕೆಟ್ ದಂತಕತೆ ಹೇಳಿದ್ದಾರೆ.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್: ಭಾರತೀಯ ಕ್ರೀಡಾಪಟುಗಳ ಸ್ಪರ್ಧೆಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ..