ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ) ವೇಟ್‌ಲಿಫ್ಟರ್ ಸಂಜಿತಾ ಚಾನು ಅವರಿಗೆ ನಾಲ್ಕು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಡೋಪಿಂಗ್ ಪರೀಕ್ಷೆಯಲ್ಲಿ ಚಾನು ಅನಾಬೊಲಿಕ್-ಆಂಡ್ರೊಜೆನಿಕ್ ಎಂಬ ಸ್ಟಿರಾಯ್ಡ್ ಸೇವಿಸಿರುವುದು ದೃಢಪಟ್ಟಿತ್ತು. ಈ ಸ್ಟೀರಾಯ್ಡ್ ಅನ್ನು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (ವಾಡಾ) ನಿಷೇಧಿಸಿದೆ.
2022ರಲ್ಲಿ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಾನು ಅನಾಬೊಲಿಕ್ ಸ್ಟಿರಾಯ್ಡ್ ತೆಗೆದುಕೊಂಡಿದ್ದರು ಎಂಬ ಶಂಕೆಯ ಮೇರೆಗೆ ಕಾರಣಕ್ಕೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮಹಿಳೆಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಡ್ರೊಸ್ಟಾನೊಲೋನ್ ಎಂಬುದು ಪ್ರಾಥಮಿಕ ಹಂತದಲ್ಲಿ ಮಾತ್ರ ಬಳಕೆ ಇದೆ. ಆದಾಗ್ಯೂ, ಸ್ಟಿರಾಯ್ಡ್ ಅನ್ನು ಸಾಮಾನ್ಯವಾಗಿ ಕ್ರೀಡಾಪಟುಗಳು ಕಾರ್ಯಕ್ಷಮತೆಯ ವೃದ್ಧಿಗಾಗಿ ದುರುಪಯೋಗ ಪಡಿಸಿಕೊಳ್ಳುವುದು ಬೆಳಕಿಗೆ ಬರುತ್ತಿದೆ.
2017 ರಲ್ಲಿ ಅಮೆರಿಕದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ಗೆ ಮುನ್ನ ಚಾನು ಅನಾಬೊಲಿಕ್ ಸ್ಟೆರಾಯ್ಡ್ ಟೆಸ್ಟೋಸ್ಟೆರಾನ್ ಬಳಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು 2018 ರಲ್ಲಿ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ನಿಷೇಧಿಸಿತ್ತು. 2020 ರಲ್ಲಿ ನಿಷೇಧ ತೆಗೆದು ಹಾಕಲಾಗಿತ್ತು.
ಇದನ್ನೂ ಓದಿ:ಕೇನ್ ವಿಲಿಯಮ್ಸನ್ ಬದಲಿಗೆ ಗುಜರಾತ್ ಸೇರಿದ ದಸುನ್ ಶನಕಾ
2014ರ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸಂಜಿತಾ 48 ಕೆ.ಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ, ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ 2018 ರಲ್ಲಿ 53 ಕೆ.ಜಿ ತೂಕ ವಿಭಾಗದಲ್ಲಿ ಚಿನ್ನದ ಸಾಧನೆ ತೋರಿದ್ದರು. 2011 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಸಂಪಾದಿಸಿದ್ದರು. ಇದಲ್ಲದೇ, 2012, 2015 ಮತ್ತು 2018ರಲ್ಲಿ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ.
ಮಣಿಪುರದ ವೇಟ್‌ಲಿಫ್ಟರ್ ಸಂಜಿತಾ ಚಾನುಗೆ ಇದೀಗ ಹೇರಿರುವ ನಾಲ್ಕು ವರ್ಷಗಳ ನಿಷೇಧ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಇನ್ನೂ 21 ದಿನಗಳ ಕಾಲಾವಕಾಶ ಇದೆ. "ಈ ಹಿಂದೆಯೂ ಪರೀಕ್ಷೆಯಲ್ಲಿ ನನಗೆ ಪಾಸಿಟಿವ್ ಬಂದಿತ್ತು. ಆದರೆ ನಂತರ ನನ್ನನ್ನು ಆರೋಪಗಳಿಂದ ಮುಕ್ತಗೊಳಿಸಲಾಯಿತು. ನನ್ನ ಆಹಾರ ಕ್ರಮವನ್ನು ನಾನು ನೋಡಿಕೊಳ್ಳುತ್ತೇನೆ" ಎಂದು ಸಂಜಿತಾ ಹೇಳಿದ್ದಾರೆ.
ಮೇಲ್ಮನವಿ ಸಲ್ಲಿಸಲ್ಲ: "ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದರೆ ಸಾಕಷ್ಟು ಸಮಯ ಹಿಡಿಯುತ್ತದೆ. ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯುವತ್ತ ಗಮನ ಹರಿಸುತ್ತೇನೆ. ಅದಕ್ಕಾಗಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ" ಎಂದು ಸಂಜಿತಾ ತಿಳಿಸಿದ್ದಾರೆ.
ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ (ಐಡಬ್ಲ್ಯುಎಫ್) ಅಧ್ಯಕ್ಷ ಸಹದೇವ್ ಯಾದವ್ ಅವರು ಸಂಜಿತಾ ಮೇಲೆ ನಾಡಾ ವಿಧಿಸಿರುವ ನಾಲ್ಕು ವರ್ಷಗಳ ನಿಷೇಧ ಖಚಿತಪಡಿಸಿದ್ದಾರೆ. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಾನು ಬೆಳ್ಳಿ ಪದಕ ಜಯಿಸಿದ್ದು, ನಾಡಾ ಕ್ರಮದ ನಂತರ ಅದನ್ನು ಹಿಂಪಡೆಯಲಾಗಿದೆ.
ಇದನ್ನೂ ಓದಿ:ಕ್ರಿಕೆಟ್ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾಗೆ ಕೋವಿಡ್ ಸೋಂಕು