ನವದೆಹಲಿ :ಭಾರತದ ಮಹಿಳಾ ಸ್ಟಾರ್ ವೈಟ್‌ಲಿಫ್ಟರ್ ಮೀರಾಬಾಯಿ ಚಾನು ಮುಂದಿನ ತಿಂಗಳು ಜಪಾನ್‌ನ ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿರುವ ಚಾನು, ಜಪಾನ್‌ನಲ್ಲಿ ದೇಶದ ಕೀರ್ತಿಪತಾಕೆ ಹಾರಿಸುವರೇ ಎಂಬುದೀಗ ಕುತೂಹಲ ಕೆರಳಿಸಿದೆ.
2017ರ ವರ್ಲ್ಡ್ ಚಾಂಪಿಯನ್ ವೈಟ್ ಲಿಫ್ಟರ್ ಚಾನು, ಕಳೆದ ಏಪ್ರಿಲ್ ತಿಂಗಳಲ್ಲಿ ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಸಾಧನೆ ಮಾಡಿದ್ದರು. ಈ ಮೂಲಕ ಮುಂದಿನ ಒಲಿಂಪಿಕ್ಸ್‌ಗೆ ಅವರು ತನ್ನ ಸ್ಥಾನವನ್ನು ಖಾತ್ರಿ ಪಡಿಸಿಕೊಂಡಿದ್ದರು.
26ರ ಹರೆಯದ ಚಾನು ಈಶಾನ್ಯ ರಾಜ್ಯ ಮಣಿಪುರದವರಾಗಿದ್ದು, ಐಡಬ್ಲ್ಯೂಎಫ್(IWF) ಶ್ರೇಯಾಂಕ ಪಟ್ಟಿಯಲ್ಲಿ ಈ ಅರ್ಹತೆ ಪಡೆದಿದ್ದಾರೆ. ಈ ಪಟ್ಟಿಯ ಪ್ರಕಾರ, ಈಕೆ ತಾನು ಸ್ಪರ್ಧಿಸುವ 48 ಕೆಜಿ ವಿಭಾಗದಲ್ಲಿ 4133,6172 ಪಾಯಿಂಟುಗಳನ್ನು ಪಡೆದಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ಕ್ರೀಡಾ ಪ್ರಾಧಿಕಾರ(SAI), 'ಟೋಕಿಯಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೀರಾ ಚಾನು ಅವರಿಗೆ ಅಭಿನಂದನೆಗಳು. ಅಂತಾರಾಷ್ಟ್ರೀಯ ವೈಟ್‌ಲಿಫ್ಟಿಂಗ್ ಫೆಡರೇಷನ್ ಅರ್ಹತಾ ಮಾನದಂಡಗಳ ಪ್ರಕಾರ ಚಾನು ಅವರು 49 ಕೆಜಿ ವಿಭಾಗದಲ್ಲಿ 2ನೇ ಸ್ಥಾನ ಪಡೆದಿದ್ದಾರೆ' ಎಂದು ತಿಳಿಸಿದ್ದಾರೆ.
ಚಾನು ಅವರು ಈ ಹಿಂದೆ ನಾಲ್ಕನೇ ಸ್ಥಾನ ಪಡೆದಿದ್ದು, ಉತ್ತರ ಕೊರಿಯಾ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹಿಂದೆ ಸರಿದ ಕಾರಣ 2ನೇ ಸ್ಥಾನ ಲಭಿಸಿತ್ತು. ಈ ಸಾಧನೆಯ ಮೂಲಕ ಚಾನು ಅವರಿಗೆ ಇದು 2ನೇ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ. ಈ ಹಿಂದೆ ಬ್ರೆಜಿಲ್‌ನ ರಿಯೋದಲ್ಲಿ ನಡೆದ ಕ್ರೀಡಾ ಮಹಾಮೇಳದಲ್ಲಿ ಕ್ಲೀನ್ ಅಂಡ್ ಜರ್ಕ್‌ನಲ್ಲಿ ಅವರಿಗೆ ಹಿನ್ನೆಡೆಯಾಗಿತ್ತು.