ನವದೆಹಲಿ:ಒಲಿಂಪಿಕ್ ಬಾಕ್ಸಿಂಗ್ ಕ್ವಾಲಿಫೈಯರ್ಗೆ ನಡೆದ ಟ್ರಯಲ್ಸ್ನಲ್ಲಿ ನಿಖಾತ್ ಝರೀನ್ ಅವರನ್ನು ಮೇರಿ ಕೋಮ್ ಮಣಿಸಿ ಹಸ್ತಲಾಘವ ಮಾಡದೇ ಹೋದ ಆಶ್ಚರ್ಯಕರ ಘಟನೆ ನಡೆದಿದೆ.
ಮೇರಿ ಕೋಮ್ ಶನಿವಾರ ನಡೆದ ಬಾಕ್ಸಿಂಗ್ ಟ್ರಯಲ್ಸ್ ಪಂದ್ಯದಲ್ಲಿ 23 ವರ್ಷದ ನಿಖಾತ್ ಝರೀನ್ ಅವರರನ್ನು 9-1ರಿಂದ ಮಣಿಸಿ ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್ ಕ್ವಾಲಿಫೈಯರ್ ಟೂರ್ನಿಗೆ ಪ್ರವೇಶ ಪಡೆದಿದ್ದಾರೆ.
ಆದರೆ, ನಿಖಾತ್ರನ್ನು ಮಣಿಸಿದ ನಂತರ ರೆಫ್ರಿ ಇಬ್ಬರು ಬಾಕ್ಸರ್ಗಳನ್ನು ಹಸ್ತಲಾಘವ ಮಾಡಲು ಹೇಳಿದಾಗ ಮೇರಿ ಕೋಮ್ ಕೋಪದಿಂದ ತಿರಸ್ಕರಿಸಿ ಹೋಗಿದ್ದಾರೆ. ಇದಕ್ಕೆ ಪ್ರತಿಕ್ರಿಸಿದ ಅವರು, ನಾನು ಏಕೆ ಆಕೆಗೆ ಹಸ್ತಲಾಘವ ಮಾಡಲಿ, ಅವರಿಗೆ ಬೇರೆಯವರಿಂದ ಗೌರವ ಬೇಕೆಂದರೆ ಮೊದಲು ಅವರು ಬೇರೆಯವರಿಗೆ ಗೌರವ ಕೊಡುವುದನ್ನು ಕಲಿಯಬೇಕು. ನನಗೆ ಅಂತಹ ಜನರು ಇಷ್ಟವಾಗುವುದಿಲ್ಲ, ನಿಮ್ಮ ಸಾಮರ್ಥ್ಯವನ್ನು ರಿಂಗ್ ಒಳಗೆ ತೋರಿಸಬೇಕೆ ಹೊರತು ಹೊರಗಡೆಯಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
6 ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಅವರನ್ನು 51 ಕೆಜಿ ವಿಭಾಗದಲ್ಲಿ ನೇರವಾಗಿ ಒಲಿಂಪಿಕ್ ಅರ್ಹತಾ ಟೂರ್ನಿಗೆ ಆಯ್ಕೆ ಮಾಡಿದ್ದಕ್ಕೆ ನಿಖಾತ್ ಝರೀನ್ ವಿರೋಧಿಸಿದ್ದರು. ಅಲ್ಲೇ ನನಗೆ ಮೇರಿ ಕೋಮ್ ಜೊತೆ ಟ್ರಯಲ್ಸ್ಗೆ ಅವಕಾಶ ಮಾಡಿಕೊಡಬೇಕು ಎಂದು ಭಾರತೀಯ ಬಾಕ್ಸಿಂಗ್ ಫೆಡರೇಷನ್ ಹಾಗೂ ಕ್ರೀಡಾ ಸಚಿವಾಲಯದ ಮೊರೆ ಹೋಗಿದ್ದರು. ಈ ಘಟನೆಯೇ ಮೇರಿ ಕೋಮ್ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.