ಮುಂಬೈ (ಮಹಾರಾಷ್ಟ್ರ): 2022ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುನ್ನವೇ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಸೇರಿಕೊಂಡಿದ್ದಾರೆ. ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಕೊಹ್ಲಿ ಬಗ್ಗೆ ಆರ್‌ಸಿಬಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು.
ಇದರ ನಡುವಯೇ ಆರ್‌ಸಿಬಿ ತನ್ನ ಟ್ವಿಟರ್ ಖಾತೆಯಲ್ಲಿ ವಿರಾಟ್ ಕೊಹ್ಲಿ ತಂಡ ಸೇರಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ‘ಕಿಂಗ್ ಕೊಹ್ಲಿಯ ಆಗಮನವಾಗಿದೆ. ಇದುವೇ ಈಗ ದೊಡ್ಡ ಸುದ್ದಿ' ಎಂದು ಆರ್‌ಸಿಬಿ ಅಧಿಕೃತವಾಗಿ ತನ್ನ ಟ್ವಿಟರ್ ಖಾತೆಯಲ್ಲಿ ಬಹಿರಂಗ ಪಡಿಸಿದೆ.
ಕೊಹ್ಲಿ ಬಹುಶಃ ಎರಡು ದಿನಗಳ ಕ್ವಾರಂಟೈನ್ ಅನುಭವಿಸಿ ಮುಂಬೈನಲ್ಲಿರುವ ಆರ್‌ಸಿಬಿ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ. ನಾಯಕತ್ವದಿಂದ ಕೆಳಗಿಳಿದಿರುವ ಕೊಹ್ಲಿ ಒಬ್ಬ ಆಟಗಾರರಾಗಿ ಈ ಬಾರಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎಂಬ ಬಗ್ಗೆಯೂ ಕುತೂಹಲ ಹೆಚ್ಚುವಂತೆ ಮಾಡಿದೆ.
2008ರಿಂದಲೂ ಕೊಹ್ಲಿ ಆರ್‌ಸಿಬಿ ಕ್ಯಾಂಪ್ನಲ್ಲಿ ಇದ್ದು, ಎಲ್ಲ ಎಂಟು ಸೀಸನ್‌ಗಳಲ್ಲೂ ಅವರೇ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. ಮೊದಲ ಸೀಸನ್ನಿಂದಲೂ ಪ್ರಶಸ್ತಿಗಾಗಿ ಹೋರಾಡುತ್ತಿರುವ ಆರ್‌ಸಿಬಿ ಈ ಬಾರಿಯಾದರೂ ನೂತನ ನಾಯಕ, ನೂತನ ತಂಡದೊಂದಿಗೆ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಐಪಿಎಲ್‌ನಲ್ಲಿ ಕೊಹ್ಲಿ ಒಟ್ಟಾರೆ 207 ಪಂದ್ಯಗಳನ್ನು ಆಡಿದ್ದು, 37.39 ಸರಾಸರಿಯಲ್ಲಿ 6,283 ರನ್ಗಳಿಸಿದ್ದಾರೆ. 129.54 ಸ್ಟ್ರೈಕ್ ರೇಟ್ನೊಂದಿಗೆ ಅತ್ಯಧಿಕ 113 ರನ್ಗಳನ್ನು ಬಾರಿಸಿದ್ದಾರೆ.
ಇದನ್ನೂ ಓದಿ:ಫುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕೆ ಗ್ರೆನೇಡ್ ಎಸೆದ ಅರ್ಜೆಂಟೀನಾ ಅಭಿಮಾನಿಗಳು!