ನೂರ್ ಸುಲ್ತಾನ್: ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ 2020ರ ಒಲಿಂಪಿಕ್ಗೆ ಅರ್ಹತೆಗಿಟ್ಟಿಸಿಕೊಂಡ ಬೆನ್ನಲ್ಲೇ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್ ಫೋಗಟ್ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಗ್ರೀಕ್ನ ಮರಿಯಾ ಪ್ರೇವೊಲರಕಿ ಅವರನ್ನು ವಿರುದ್ಧ 4-1 ಅಂತರದಲ್ಲಿ ಮಣಿಸಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಇಂದು ನಡೆದಿದ್ದ ಮರುಹಂಚಿಕೆಯ ಮೊದಲ ಪಂದ್ಯದಲ್ಲಿ ಉಕ್ರೇನ್‍ನ ಯುವಿಲಿಯಾ ಅವರನ್ನು 5-0ಯಲ್ಲಿ ಮಣಿಸಿದ್ದ ಫೋಗಟ್, ಎರಡನೇ ಪಂದ್ಯದಲ್ಲಿ ಕಳೆದ ಬಾರಿಯ ವಿಶ್ವ ಚಾಂಪಿಯನ್ಶಿಪ್ನ ಬೆಳ್ಳಿ ಪದಕ ವಿಜೇತೆ ಅಮೆರಿಕದ ಸಾರಾ ಹಿಲ್ಡರ್ಬ್ರಾಂಡ್ರನ್ನು 8-2 ರಲ್ಲಿ ಮಣಿಸಿ 2020ರ ಟೋಕಿಯೋ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.
ಕ್ವಾರ್ಟರ್ ಫೈನಲ್ನಲ್ಲಿ ಸೋತರೂ ಮರುಹಂಚಿಕೆ ಸುತ್ತಿ(Repechage round)ನಲ್ಲಿ ಸ್ಪರ್ಧಿಸಿ ಅವಕಾಶ ಗಿಟ್ಟಿಸಿಕೊಂಡ ಫೋಗಟ್ ಸತತ 3 ಪಂದ್ಯಗಳಲ್ಲಿ ಬಲಿಷ್ಠ ಕುಸ್ತಿಪಟುಗಳನ್ನು ಮಣಿಸಿ ಕಂಚು ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಫೋಗಟ್ಗಿಂತ ಮೊದಲು ಅಲ್ಕಾ ತೋಮರ್(2006), ಗೀತಾ ಫೋಗಟ್(2012), ಬಬಿತಾ ಫೋಗಟ್(2012) ಹಾಗೂ ಪೂಜ ಧಂಡಾ(2018)ರಲ್ಲಿ ಪದಕ ಗೆದ್ದಿದ್ದರು.