ನವದೆಹಲಿ:ಛತ್ರಸಾಲ್ ಸ್ಟೇಡಿಯಂನಲ್ಲಿ ಕೆಲ ದಿನಗಳ ಹಿಂದೆ ನಡೆದ ಯುವ ಕುಸ್ತಿಪಟು ಸಾಗರ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ, ಎರಡು ಬಾರಿ ಭಾರತಕ್ಕೆ ಒಲಿಂಪಿಕ್ಸ್ನಲ್ಲಿ ಪದಕ ತಂದುಕೊಟ್ಟಿದ್ದ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಪೊಲೀಸರು ಬಂಧಿಸುತ್ತಿರುವುದು. ಎರಡು ವಾರಗಳ ಹಿಂದೆ ನಡೆದಿದ್ದ ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಮೊದಲ ಆರೋಪಿಯಾಗಿದ್ದರು. ಈ ಪ್ರಕರಣ ಸಂಬಂಧ ದೆಹಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ ಸುಶೀಲ್ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡು ತಿರುಗುತ್ತಿದ್ದರು.
ಆದ್ರೆ ದೆಹಲಿ ಪೊಲೀಸರ ವಿಶೇಷ ತಂಡ ನಿನ್ನೆ ಸುಶೀಲ್ ಕುಮಾರ್ ಅವರನ್ನು ಬಂಧಿಸಿದೆ. ಇವರ ಜೊತೆ ಮತ್ತೋರ್ವ ಆರೋಪಿ ಅಜಯ್ ಕುಮಾರ್ ಕೂಡ ಬಂಧನಕ್ಕೊಳಗಾಗಿದ್ದಾರೆ.
ಎಸಿಪಿ ಅತ್ತರ್ ಸಿಂಗ್, ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್, ಕರಂಬೀರ್ ತಂಡವು ಈ ಇಬ್ಬರನ್ನು ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ಸೆರೆ ಹಿಡಿದಿದೆ ಎಂಬ ಮಾಹಿತಿ ದೊರೆತಿದೆ.
ಆರೋಪಿಗಳಾದ ಕುಸ್ತಿಪಟು ಸುಶೀಲ್ ಕುಮಾರ್ ಮತ್ತು ಅಜೇಯ್ ಕುಮಾರ್
ಈ ಹಿಂದೆ ಸುಶೀಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಅಲ್ಲದೆ ದೆಹಲಿ ಪೊಲೀಸರು ಇವರ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಇನಾಮು ನೀಡುವುದಾಗಿ ಘೋಷಿಸಿದ್ದರು. ಈ ಮಧ್ಯೆ ಕೋರ್ಟ್ ಕೂಡ ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು.
ಮೇ 4 ರಂದು ನಡೆದಿದ್ದ ಈ ಗಲಾಟೆಯಲ್ಲಿ ಸಾಗರ್ ರಾಣಾ ಕೊಲೆಯಾದರೆ, ಅವರ ಇಬ್ಬರು ಸ್ನೇಹಿತರಾದ ಸೋನು ಮತ್ತು ಅಮಿತ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು.