ಲಂಡನ್: 2026ರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ವಿಕ್ಟೋರಿಯ ರಾಜ್ಯ ಆಯೋಜಿಸಲಿದೆ. ಇದೇ ಮೊದಲ ಬಾರಿಗೆ ಒಂದೇ ನಗರದಲ್ಲಿ ಬಹುಪಾಲು ಸ್ಪರ್ಧೆಗಳನ್ನು ಆಯೋಜಿಸುವ ಸಂಪ್ರದಾಯಕ್ಕೆ ಬ್ರೇಕ್ ನೀಡಿದ್ದು, ಈ ಬಾರಿ ಹಲವು ನಗರಗಳಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಿದೆ.
2026 ಕ್ರೀಡಾಕೂಟವನ್ನು ಮಾರ್ಚ್ನಲ್ಲಿ ಮೆಲ್ಬೋರ್ನ್, ಗೀಲಾಂಗ್, ಬೆಂಡಿಗೊ, ಬಲ್ಲರತ್ ಮತ್ತು ಗಿಪ್ಸ್‌ಲ್ಯಾಂಡ್ ಸೇರಿದಂತೆ ಹಲವಾರು ನಗರಗಳು ಮತ್ತು ಪ್ರಾದೇಶಿಕ ಕೇಂದ್ರಗಳಲ್ಲಿ ಆಯೋಜಿಸಲಾಗುವುದು, ಪ್ರತಿಯೊಂದು ನಗರವೂ ತನ್ನದೇ ಆದ ಕ್ರೀಡಾಗ್ರಾಮವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭ 1,00,000 ಆಸನ ವ್ಯವಸ್ಥೆಯುಳ್ಳ ಐತಿಹಾಸಿಕ ಎಂಸಿಜೆ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿದೆ ಎಂದು ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ ಮಂಗಳವಾರ ಘೋಷಿಸಿದೆ. ಟ್ವೆಂಟಿ-20 ಕ್ರಿಕೆಟ್ ಸೇರಿದಂತೆ 16 ಕ್ರೀಡೆಗಳ ಆರಂಭಿಕ ಪಟ್ಟಿಯನ್ನು ಕ್ರೀಡಾಕೂಟಕ್ಕೆ ಮುಂದಿಡಲಾಗಿದ್ದು, ಈ ವರ್ಷದ ನಂತರ ಮತ್ತಷ್ಟು ಕ್ರೀಡೆಗಳನ್ನು ಸೇರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಆರಂಭಿಕ ಪಟ್ಟಿಯಲ್ಲಿ ಶೂಟಿಂಗ್ ಮತ್ತು ಕುಸ್ತಿಯಂತಹ ಕ್ರೀಡೆಗಳನ್ನು ಕೈಬಿಡಲಾಗಿದೆ. ಈ ಕ್ರೀಡೆಗಳಲ್ಲಿ ಭಾರತ ಹಿಂದಿನ ಆವೃತ್ತಿಗಳಲ್ಲಿ ಉತ್ತಮ ಸಾಧನೆ ಮಾಡಿತ್ತು. ಇವರೆಡಲ್ಲದೆ ಆರ್ಚರಿಯನ್ನು ಕ್ರೀಡೆಗಳ ಪಟ್ಟಿಯಿಂದ ಕೈಬಿಡಲಾಗಿದೆ.
ಆಸ್ಟ್ರೇಲಿಯಾ ಕಾಮನ್ವೆಲ್ತ್ ಗೇಮ್ಸ್ ಅನ್ನು ಈಗಾಗಲೇ 5 ಬಾರಿ ಆಯೋಜಿಸಿದೆ. 2006ರಲ್ಲಿ ವಿಕ್ಟೋರಿಯಾದ ಮೆಲ್ಬೋರ್ನ್ನಲ್ಲಿ ಆಯೋಜಿಸಲಾಗಿತ್ತು. 1938ರಲ್ಲಿ ಸಿಡ್ನಿಯಲ್ಲಿ, 1962ರಲ್ಲಿ ಪರ್ತ್ನಲ್ಲಿ, 1982ರಲ್ಲಿ ಬ್ರಿಸ್ಬೇನ್ ಮತ್ತು 2018ರ ಆವೃತ್ತಿ ಗೋಲ್ಡ್ಕಾಸ್ಟ್ನಲ್ಲಿ ನಡೆದಿತ್ತು.
ಇದನ್ನೂ ಓದಿ:Exclusive: ಮಹಿಳಾ ಐಪಿಎಲ್ ಸದ್ಯಕ್ಕೆ ಕಷ್ಟಸಾಧ್ಯ?- ಬಿಸಿಸಿಐ ಅಧಿಕಾರಿ ವಿವರಣೆ ಹೀಗಿದೆ..