ಕರ್ನಾಟಕ

karnataka

ETV Bharat / sports

ಇತಿಹಾಸ ನಿರ್ಮಿಸಿದ ವಂದನಾ ಕಟಾರಿಯಾ; 300 ಹಾಕಿ ಪಂದ್ಯ ಆಡಿದ ಮೊದಲ ಭಾರತೀಯ ಆಟಗಾರ್ತಿ

300 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ದೇಶದ ಮಹಿಳಾ ಹಾಕಿ ತಂಡದ ಫಾರ್ವರ್ಡ್ ಆಟಗಾರ್ತಿ ವಂದನಾ ಕಟಾರಿಯಾ ಪಾತ್ರರಾಗಿದ್ದಾರೆ.

Vandana Kataria created history
ಹೊಸ ಇತಿಹಾಸ ನಿರ್ಮಿಸಿದ ವಂದನಾ ಕಟಾರಿಯಾ.. 300 ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರ..

By ETV Bharat Karnataka Team

Published : Nov 2, 2023, 2:28 PM IST

ರಾಂಚಿ (ಮಧ್ಯಪ್ರದೇಶ):ಭಾರತೀಯ ಮಹಿಳಾ ಹಾಕಿ ತಂಡದ ಫಾರ್ವರ್ಡ್ ಆಟಗಾರ್ತಿ ವಂದನಾ ಕಟಾರಿಯಾ ಅವರು ಇತಿಹಾಸ ನಿರ್ಮಿಸಿದ್ದಾರೆ. 300 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಟಾರಿಯಾ ಅವರನ್ನು ಹಾಕಿ ಇಂಡಿಯಾ ಅಭಿನಂದಿಸಿದೆ.

ಉತ್ತರಾಖಂಡದ ರೋಶನಾಬಾದ್ ನಿವಾಸಿ ವಂದನಾ, ರಾಂಚಿಯಲ್ಲಿ ನಡೆದ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023ರಲ್ಲಿ ಜಪಾನ್ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಈ ಸಾಧನೆ ಮಾಡಿದರು.

2023ರ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಈವರೆಗೆ ಅಜೇಯವಾಗಿ ಮುನ್ನುಗ್ಗುತ್ತಿದೆ. ಥಾಯ್ಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯವನ್ನು 7-1ರಿಂದ ಗೆದ್ದಿದೆ. ನಂತರ ಎರಡನೇ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 5-0 ಜಯ ಸಾಧಿಸಿತು. ಮೂರನೇ ಪಂದ್ಯದಲ್ಲಿ ಚೀನಾವನ್ನು 2-1 ಗೋಲುಗಳಿಂದ ಸೋಲಿಸಿತ್ತು. ಮಂಗಳವಾರ ನಡೆದ ರೋಚಕ ಪಂದ್ಯದಲ್ಲಿ ಜಪಾನ್ ತಂಡವನ್ನು 2-1 ಗೋಲುಗಳಿಂದ ಮಣಿಸಿದೆ.

ವಂದನಾ ಕಟಾರಿಯಾ ಸಾಧನೆ ಹಾದಿ:ವಂದನಾ ಜರ್ಮನಿಯ ಮೊಂಚೆಂಗ್ಲಾಡ್‌ಬ್ಯಾಕ್‌ನಲ್ಲಿ ನಡೆದ ಜೂನಿಯರ್ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಟಾಪ್ ಸ್ಕೋರರ್ ಆಗಿದ್ದ ವೇಳೆ ಮುನ್ನೆಲೆಗೆ ಬಂದಿದ್ದರು. ತಂಡಕ್ಕೆ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಲಿಂಪಿಕ್ ಗೇಮ್ಸ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಹಾಕಿ ಆಟಗಾರ್ತಿಯೂ ಆಗಿದ್ದಾರೆ. 2022ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅನುಭವಿ ಫಾರ್ವರ್ಡ್ ಆಟಗಾರ್ತಿ 2016ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮತ್ತು 2017ರಲ್ಲಿ ಮಹಿಳಾ ಏಷ್ಯಾ ಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. 2022ರ ಮಹಿಳಾ ಏಷ್ಯಾ ಕಪ್‌ನಲ್ಲಿ ಕಂಚಿನ ಪದಕ ಗೆಲ್ಲಲು ತಂಡಕ್ಕೆ ಸಹಾಯ ಮಾಡಿದರು. ಎಫ್​ಐಹೆಚ್ ಪ್ರೊ ಲೀಗ್ 2021/22ನಲ್ಲಿ ಮೂರನೇ ಸ್ಥಾನ ಗಳಿಸಿದರು. ನಂತರ ಎಫ್​ಐಹೆಚ್ ನೇಷನ್ಸ್ ಕಪ್ 2022 ಗೆದ್ದಿದ್ದಾರೆ. ಇವರ ಹೆಸರಿನಲ್ಲಿ 2022ರ ಕಾಮನ್‌ವೆಲ್ತ್ ಕಂಚಿನ ಪದಕ ಕೂಡ ಇದೆ.

ವಂದನಾ ಕಟಾರಿಯಾ ಮಾತು:ವಂದನಾ ಮಾತನಾಡಿ, ''ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸುವ ನನಗೆ ಭಾಗ್ಯ ಸಿಕ್ಕಿದೆ. ನನ್ನ 300ನೇ ಮ್ಯಾಚ್​ ಆಡಿರುವುದು ನಿಜಕ್ಕೂ ನನಗೆ ವಿಶೇಷ ಕ್ಷಣ. ಈ ಪ್ರಯಾಣವು ನಿಜವಾಗಿಯೂ ವಿಶೇಷವಾಗಿದೆ. ರಾಷ್ಟ್ರೀಯ ಜೆರ್ಸಿಯನ್ನು ಮತ್ತೆ ಮತ್ತೆ ಧರಿಸಲು ನಾನು ಬಯಸುತ್ತೇನೆ. ನನಗೆ ಬೆಂಬಲ ನೀಡಿದ ಹಾಕಿ ಇಂಡಿಯಾ, ನನ್ನ ತಂಡದ ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ ಹೇಳಲು ಬಯಸುತ್ತೇನೆ'' ಎಂದು ಹೇಳಿದ್ದಾರೆ.

ಹಾಕಿ ಇಂಡಿಯಾ ಅಧ್ಯಕ್ಷರಿಂದ ಅಭಿನಂದನೆ:ಹಾಕಿ ಇಂಡಿಯಾ ಅಧ್ಯಕ್ಷ ಡಾ.ದಿಲೀಪ್ ಟಿರ್ಕಿ ಪ್ರತಿಕ್ರಿಯಿಸಿ, ''300ನೇ ಅಂತರರಾಷ್ಟ್ರೀಯ ಪಂದ್ಯ ಆಡಿ ಸಾಧನೆ ಮಾಡಿದ ವಂದನಾ ಕಟಾರಿಯಾ ಅವರನ್ನು ಅಭಿನಂದಿಸುತ್ತೇನೆ. ಭಾರತೀಯ ಜೆರ್ಸಿ ಧರಿಸಿ ಇಷ್ಟು ದೀರ್ಘ ಕಾಲದವರೆಗೆ ದೇಶವನ್ನು ಪ್ರತಿನಿಧಿಸುವುದು ನಿಜಕ್ಕೂ ಸ್ಮರಣೀಯ ಕ್ಷಣ. ಅವರ ಪ್ರಯಾಣವು ಅಸಾಧಾರಣವಾಗಿದೆ ಮತ್ತು ಭವಿಷ್ಯದಲ್ಲಿ ನಾವು ಅವರಿಂದ ಇನ್ನಷ್ಟು ಉತ್ತಮ ಪ್ರದರ್ಶನಗಳನ್ನು ಕಾಣಲು ಬಯಸುತ್ತೇವೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕಿವೀಸ್​ಗೆ ಏಟಿನ ಮೇಲೆ ಏಟು: ಗಾಯಗೊಂಡ ಆಟಗಾರರ ಪಟ್ಟಿ ಸೇರಿದ ಮ್ಯಾಟ್​ ಹೆನ್ರಿ

ABOUT THE AUTHOR

...view details