ಐಲ್ ಆಫ್ ಮ್ಯಾನ್(ಯುಕೆ): ಇಲ್ಲಿ ನಡೆಯುತ್ತಿರುವ ಫಿಡೆ ಮಹಿಳಾ ಗ್ರ್ಯಾಂಡ್ ಸ್ವಿಸ್ ಚೆಸ್ ಪಂದ್ಯಾಟದಲ್ಲಿ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಗ್ಯಾನಂದ ಅವರ ಸಹೋದರಿ ಆರ್.ವೈಶಾಲಿ ಚಿನ್ನದ ಪದಕ ಪಡೆದಿದ್ದಾರೆ. ಈ ಮೂಲಕ ಫಿಡೆ ಮಹಿಳಾ ಗ್ರ್ಯಾಂಡ್ ಸ್ವಿಸ್ ಟೈಟಲ್ ಮುಡಿಗೇರಿಸಿಕೊಂಡರು. ವೈಶಾಲಿ ಮಹಿಳಾ ಗ್ರ್ಯಾಂಡ್ ಸ್ವಿಸ್ ಗೆದ್ದ ಮೊದಲ ಭಾರತೀಯಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವೈಶಾಲಿ ಮಂಗೋಲಿಯಾದ ಬತ್ಖುಯಾಗ್ ಮುಂಗುಟುಲ್ ಅವರ ವಿರುದ್ಧದ ಅಂತಿಮ ಸುತ್ತಿನ ಪಂದ್ಯದಲ್ಲಿ ಡ್ರಾ ಮಾಡಿಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದರು. ಈ ಗೆಲುವಿನ ಮೂಲಕ ಮುಂದಿನ ವರ್ಷ ಕೆನಡಾದಲ್ಲಿ ನಡೆಯಲಿರುವ ವುಮೆನ್ಸ್ ಕ್ಯಾಂಡಿಡೇಟ್ ಇವೆಂಟ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದರು.
ಬತ್ಖುಯಾಗ್ ಮುಂಗುಟುಲ್ ಮತ್ತು ವೈಶಾಲಿ ನಡುವಿನ ಪಂದ್ಯದಲ್ಲಿ ಪ್ರಶಸ್ತಿ ಪಡೆಯಲು ತೀವ್ರ ಪೈಪೋಟಿ ನಡೆಯಿತು. ಹನ್ನೊಂದನೇ ಸುತ್ತಿನಲ್ಲಿ ವೈಶಾಲಿ ಅವರು ಬತ್ಖುಯಾಗ್ ಮುಂಗುಟುಲ್ ಅವರನ್ನು ಬಗ್ಗುಬಡಿದರು. 8.5 ಅಂಕ ಪಡೆದ ವೈಶಾಲಿ, ಚಿನ್ನದ ಪದಕ ಮತ್ತು 25000 ಯುಎಸ್ ಡಾಲರ್ ಬಹುಮಾನ ಗೆದ್ದುಕೊಂಡರು.
ಉಕ್ರೇನ್ನ ಅನ್ನಾ ಮುಝಿಚುಕ್ ಅವರು ಸ್ವೀಡನ್ ಅನುಭವಿ ಗ್ರಾಂಡ್ ಮಾಸ್ಟರ್ ಪ್ರಿಯಾ ಕಾಮ್ಲಿಂಗ್ ಅವರ ವಿರುದ್ಧ ಡ್ರಾ ಸಾಧಿಸಿದರು. ಇದರಿಂದ ವೈಶಾಲಿಗೆ ಗೆಲುವು ಲಭಿಸಿತು. ವೈಶಾಲಿ ಕೇವಲ 34 ನಡೆಗಳಲ್ಲಿ ಪಂದ್ಯ ಡ್ರಾ ಮಾಡಿಕೊಂಡರು. ಇದಕ್ಕೂ ಮುನ್ನ, 10ನೇ ಸುತ್ತಿನಲ್ಲಿ ಚೀನಾದ ಝೋಂಗಿ ಟಾನ್ ವಿರುದ್ಧ ರಕ್ಷಣಾತ್ಮಕ ಆಟ ಪ್ರದರ್ಶಿಸಿದರು.
ಮುಕ್ತ ವಿಭಾಗ- ವಿದಿತ್ ಗುಜ್ರಾತಿಗೆ ಗೆಲುವು: ಮುಕ್ತ ವಿಭಾಗದ ಪಂದ್ಯಾಟದಲ್ಲಿ ವಿದಿತ್ ಗುಜ್ರಾತಿ ಗೆಲುವು ದಾಖಲಿಸಿದ್ದಾರೆ. ವಿದಿತ್ ಸರ್ಬಿಯಾದ ಅಲೆಕ್ಸಾಂಡರ್ ಪ್ರೆಡ್ಕೆ ಅವರ ವಿರುದ್ಧ ಗೆಲುವು ಸಾಧಿಸಿದ್ದು, ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಈ ಮೂಲಕ ವಿದಿತ್, ಕೆನಡಾದಲ್ಲಿ ನಡೆಯಲಿರುವ ಕ್ಯಾಂಡಿಡೇಟ್ ಇವೆಂಟ್ ಮತ್ತು ಮುಕ್ತ ವಿಭಾಗದ ಅನೆಕ್ಸ್ ಟೈಟಲ್ಗೂ ಅರ್ಹತೆ ಪಡೆದರು.
ಗ್ರ್ಯಾಂಡ್ ಮಾಸ್ಟರ್ ಪ್ರಗ್ಯಾನಂದ ಉಕ್ರೇನ್ನ ಆಂಟನ್ ಕೊರೊಬೊವ್ ಅವರೊಂದಿಗೆ ಡ್ರಾ ಸಾಧಿಸಿದರು. ಈ ಮೂಲಕ 6 ಅಂಕಗಳನ್ನು ಪಡೆದರು. ಇವರ ಜೊತೆಗೆ ಪಿ.ಹರಿಕೃಷ್ಣ, ಅರವಿಂದ್ ಚಿದಂಬರಂ, ಎಸ್. ಎಲ್. ನಾರಾಯಣನ್ ಹತ್ತನೇ ಸುತ್ತಿನ ಪಂದ್ಯದಲ್ಲಿ 5.5 ಅಂಕ ಗಳಿಸಿದರು. ಮಹಿಳಾ ವಿಭಾಗದಲ್ಲಿ, ತಾನಿಯ ಸಚ್ ದೇವ್, ಡಿ ಹಾರಿಕಾ 5.5 ಅಂಕ ಗಳಿಸುವ ಮೂಲಕ ಗೆಲುವು ಸಾಧಿಸಿದರೆ, ವಂತಿಕಾ ಅಗರ್ವಾಲ್, ದಿವ್ಯ ದೇಶ್ಮುಖ್ 5 ಅಂಕಗಳನ್ನು ಗಳಿಸಿದರು.
ಇದನ್ನೂ ಓದಿ:ತಮ್ಮನಂತೆ ಅಕ್ಕ! ಮಹಿಳೆಯರ ವಿಭಾಗದ ಚೆಸ್ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಮಣಿಸಿದ ಆರ್.ವೈಶಾಲಿ