ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಂತರ ಭಾರತದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿದೆ. ಈಗಾಗಲೇ ಒಡಿಶಾ ಸರ್ಕಾರ ಭಾರತೀಯ ಹಾಕಿಗೆ ಮುಂದಿನ 10 ವರ್ಷಗಳ ಪ್ರಾಯೋಜಕತ್ವವನ್ನು ಮುಂದೂಡಿದೆ. ಇದೀಗ ಉತ್ತರ ಪ್ರದೇಶ ಸರ್ಕಾರ ಕೂಡ ಕ್ರೀಡೆಗೆ ಮಹತ್ವ ನೀಡಿ, ಭಾರತೀಯ ಕುಸ್ತಿಯನ್ನು 2032ರ ಬ್ರಿಸ್ಬೇನ್ ಒಲಿಂಪಿಕ್ಸ್ವರೆಗೆ ದತ್ತು ತೆಗೆದಕೊಳ್ಳುವುದಾಗಿ ಗುರುವಾರ ಘೋಷಣೆ ಹೊರಡಿಸಿದೆ.
ಒಡಿಶಾ ಸರ್ಕಾರ ಭಾರತೀಯ ಹಾಕಿಗೆ ತಮ್ಮ ಬೆಂಬಲವನ್ನು ಮುಂದುವರಿಸಿ ತೆಗೆದುಕೊಂಡ ನಿರ್ಧಾರದಿಂದ ಪ್ರೇರಣೆಯಾಗಿ ತೆಗೆದುಕೊಂಡಿರುವ ಉತ್ತರ ಪ್ರದೇಶ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಮದು ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ. ಯುಪಿ ಸರ್ಕಾರ ಸುಮಾರು 170 ಕೋಟಿ ರೂಪಾಯಿಗಳನ್ನು ಕುಸ್ತಿ ಕ್ರೀಡೆಗಾಗಿ ಮೀಸಲಿಡಲಿದೆ ಎಂದು ತಿಳಿದು ಬಂದಿದೆ.
ಚಿಕ್ಕರಾಜ್ಯವಾದರೂ ದೊಡ್ಡ ಬೆಂಬಲ
ಒಡಿಶಾ ಒಂದು ಚಿಕ್ಕ ರಾಜ್ಯ , ಆದರೂ ಹಾಕಿ ಕ್ರೀಡೆಯನ್ನು ಇಷ್ಟು ದೊಡ್ಡ ರೀತಿಯಲ್ಲಿ ಬೆಂಬಲಿಸುತ್ತಿದ್ದಾರೆ. ಆದ್ದರಿಂದ ನಾವೂ ಕೂಡ ದೊಡ್ಡ ರಾಜ್ಯವಾಗಿರುವ ಯುಪಿ ಏಕೆ ಕುಸ್ತಿಯನ್ನು ಬೆಂಬಲಿಸುವುದಿಲ್ಲ ಎಂದು ನಾವು ಯೋಚಿಸಿದೆವು. ನಂತರ ನಾವು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸಂಪರ್ಕಿಸಿದಾಗ, ಅವರು ಕುಸ್ತಿಗೆ ಬೆಂಬಲಿಸಲು ಒಪ್ಪಿಕೊಂಡಿದ್ದಾರೆ ಎಂದು ಸಿಂಗ್ ಪಿಟಿಐಗೆ ಹೇಳಿದ್ದಾರೆ.