ಚೆನ್ನೈ (ತಮಿಳುನಾಡು): ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದ್ದು, ಇಂದು ಫೈನಲ್‌ನಲ್ಲಿ ಮಲೇಷ್ಯಾವನ್ನು ಎದುರಿಸಲಿದೆ. ಸೋಲಿಲ್ಲದ ಸರದಾರನಾಗಿ ಫೈನಲ್‌ಗೆ ಟೀಮ್ ಇಂಡಿಯಾ ಲಗ್ಗೆ ಇಟ್ಟಿದೆ. 5ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಭಾರತ ತಂಡ ನಾಲ್ಕನೇ ಪ್ರಶಸ್ತಿ ಗೆಲುವಿಗೆ ಎದುರು ನೋಡುತ್ತಿದೆ.
ಭಾರತ ಇದುವರೆಗೆ ಟೂರ್ನಿಯಲ್ಲಿ ಅಜೇಯವಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರೌಂಡ್ ರಾಬಿನ್ ಸುತ್ತಿನಲ್ಲಿ ಚೀನಾ, ಮಲೇಷ್ಯಾ, ದಕ್ಷಿಣ ಕೊರಿಯಾ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ಭಾರತ ಜಪಾನ್ ವಿರುದ್ಧ 1-1 ರಿಂದ ಡ್ರಾ ಮಾಡಿಕೊಂಡರು. ಸೆಮಿಸ್‌ನಲ್ಲಿ ಜಪಾನ್ ತಂಡವನ್ನು 5-0 ಅಂತರದಿಂದ ಸೋಲಿಸಿ ಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.
ಒಂಬತ್ತನೇ ಶ್ರೇಯಾಂಕದ ತಂಡವಾದ ಮಲೇಷ್ಯಾ ರೌಂಡ್ ರಾಬಿನ್ ಸುತ್ತಿನಲ್ಲಿ ಭಾರತದ ವಿರುದ್ಧ ಮಾತ್ರ ಸೋಲು ಕಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತ್ತು. ಸೆಮಿಸ್‌ನಲ್ಲಿ ಅವರು ಹಾಲಿ ಚಾಂಪಿಯನ್ ಕೊರಿಯಾವನ್ನು 6-2 ಅಂತರದಿಂದ ಸೋಲಿಸಿ ಮೊದಲ ಫೈನಲ್‌ಗೆ ಮಲೇಷ್ಯಾ ಪ್ರವೇಶ ಪಡೆದುಕೊಂಡಿದೆ. ಈ ಮೊದಲು ಮಲೇಷ್ಯಾ ತಂಡ 5 ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.
ಪ್ರಸ್ತುತ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಏಳನೇ ಆವೃತ್ತಿ ನಡೆಯುತ್ತಿದ್ದು, ಇದರಲ್ಲಿ ಭಾರತ ಐದನೇ ಬಾರಿಗೆ ಫೈನಲ್ ಪ್ರವೇಶ ಪಡೆಯುತ್ತಿದೆ. ಇದರಲ್ಲಿ ಈಗಾಗಲೇ ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2011 ರ ಚೊಚ್ಚಲ ಆವೃತ್ತಿ, 2016 ಮತ್ತು 2018 ರಲ್ಲಿ ಪ್ರಶಸ್ತಿಯನ್ನು ಗೆದ್ದಿತ್ತು. 2018ರಲ್ಲಿ ಭಾರತ ಮತ್ತು ಪಾಕಿಸ್ತಾನ ಜಂಟಿ ಚಾಂಪಿಯನ್ ಆಗಿದ್ದವು. ಇದಾದ ನಂತರ ಭಾರತ ಮತ್ತೆ ಪ್ರಶಸ್ತಿಗೆ ಮುತ್ತಿಡುವ ತವಕದಲ್ಲಿದೆ.