ಲಂಡನ್: ಪ್ರೀಮಿಯರ್ ಲೀಗ್ ಫುಟ್ಬಾಲ್ ಕ್ಲಬ್ ಚೆಲ್ಸಿಯಾದ ಮಾಲೀಕ ರೋಮನ್ ಅಬ್ರಮೊವಿಚ್ ಸೇರಿದಂತೆ ಸೇರಿದಂತೆ ಏಳು ಶ್ರೀಮಂತ ರಷ್ಯನ್ನರ ಮೇಲೆ ಬ್ರಿಟನ್ ಸರ್ಕಾರ ಪ್ರಯಾಣ ನಿಷೇಧ ಮತ್ತು ದೇಶದಲ್ಲಿರುವ ಅವರ ಆಸ್ತಿ ಬಳಕೆಯನ್ನು ನಿರ್ಬಂಧಿಸಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡುತ್ತಿರುವುದನ್ನು ಖಂಡಿಸಿ ಬ್ರಿಟನ್ ಸರ್ಕಾರ ರಷ್ಯಾದ ಮೇಲೆ ನಿರ್ಬಂಧ ವಿಧಿಸಿರುವುದರ ಜೊತೆಗೆ ರಷ್ಯನ್ ವ್ಯಾಪಾರೋದ್ಯಮಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತಿದೆ.
ಅಬ್ರಮೊವಿಚ್ ಅವರ ಸ್ವತ್ತುಗಳನ್ನು ಫ್ರೀಜ್(ಬಳಕೆ ಮಾಡದಂತೆ ಮತ್ತು ಮಾರಾಟ ಮಾಡದಂತೆ ಕ್ರಮ) ಮಾಡಲಾಗಿದೆ. ಜೊತೆಗೆ, ಅವರು ಯುಕೆಗೆ ಭೇಟಿ ನೀಡುವುದನ್ನೂ ನಿಷೇಧಿಸಲಾಗಿದೆ. ಯುಕೆಯ ಯಾವುದೇ ವ್ಯಕ್ತಿ ಮತ್ತು ವ್ಯವಹಾರಗಳಲ್ಲಿ ವಹಿವಾಟು ನಡೆಸುವುದನ್ನು ನಿರ್ಬಂಧಿಸಲಾಗಿದೆ ಎಂದು ಅಲ್ಲಿನ ಸರ್ಕಾರ ಗುರುವಾರ ಘೋಷಣೆ ಮಾಡಿದೆ.