ನವದೆಹಲಿ:ಭಾರತದ ಅಗ್ರ ಟ್ರಿಪಲ್ ಜಂಪರ್ ಐಶ್ವರ್ಯಾ ಬಾಬು ಅವರು ನಿಷೇಧಿತ ಸ್ಟಿರಾಯ್ಡ್ ಬಳಸಿದ್ದಕ್ಕಾಗಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯ (ನಾಡಾ) ಶಿಸ್ತು ಸಮಿತಿಯು 4 ವರ್ಷಗಳ ಕಾಲ ನಿಷೇಧ ಹೇರಿದೆ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಾರ್ಚ್ 6 ರವರೆಗೆ ಅವಕಾಶ ನೀಡಲಾಗಿದೆ. ಕಳೆದ ವರ್ಷ ನಡೆದ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಉದ್ದೀಪನ ಮದ್ದು ತಪಾಸಣೆಯ ವೇಳೆ 25 ವರ್ಷದ ಅಥ್ಲೀಟ್ ಧನಾತ್ಮಕ ಫಲಿತಾಂಶ ನೀಡಿದ ಕಾರಣ ಅವರನ್ನು ಗೇಮ್ಸ್ನಿಂದ ಕೈಬಿಡಲಾಗಿತ್ತು.
ಆಟಗಾರ್ತಿಯನ್ನು ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿಯ (ವಾಡಾ) ನಿಷೇಧಿತ ಪಟ್ಟಿಗೆ ಸೇರಿಸಿ, ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಆ ಬಳಿಕ ಆಕೆಯ ಮಾದರಿಯನ್ನು ಸಂಗ್ರಹಿಸಿ ತಪಾಸಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಐಶ್ವರ್ಯಾ ನಿಷೇಧಿತ ಮದ್ದು ಸೇವಿಸಿದ್ದು ದೃಢಪಟ್ಟಿದೆ. ಧನಾತ್ಮಕ ವರದಿ ಬಂದ ಕಾರಣ ಇದೀಗ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಜೂನ್ 13 ಮತ್ತು 14 ರಂದು ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಂತರ್ರಾಜ್ಯ ಚಾಂಪಿಯನ್‌ಶಿಪ್‌ನಲ್ಲೂ ಆಟಗಾರ್ತಿ ಉದ್ದೀಪನ ಮದ್ದು ಸೇವಿಸಿದ್ದು ಕಂಡುಬಂದಿತ್ತು.
ಗಾಯಕ್ಕೆ ಪಡೆದ ಔಷಧ:ಐಶ್ವರ್ಯಾ ಸೇವಿಸಿದ ಔಷಧ "ಅನಾಬೊಲಿಕ್ ಸ್ಟೀರಾಯ್ಡ್" ಎಂದು ನಾಡಾ ಗುರುತಿಸಿದೆ. ಇದನ್ನು ವಾಡಾದ ನಿಷೇಧಿತ ಪಟ್ಟಿಯಲ್ಲಿ ಸೇರಿಸಲಾಗಿದೆ. ಕ್ರೀಡಾಪಟು ಚಿಕಿತ್ಸೆಗೂ ಮೊದಲು ಪೂರ್ವ ಮಾಹಿತಿ ನೀಡಿಲ್ಲ. ಚಿಕಿತ್ಸಕ ಬಳಕೆಯ ವಿನಾಯಿತಿಯನ್ನು (ಟಿಯುವಿ) ತೆಗೆದುಕೊಂಡಿಲ್ಲ ಎಂದು ಅದು ಹೇಳಿದೆ.
ಈ ಬಗ್ಗೆ ಸಮರ್ಥನೆ ನೀಡಿರುವ ಐಶ್ವರ್ಯಾ, "ತನ್ನ ಗಮನಕ್ಕೆ ಬಾರದೇ ಔಷಧ ಪಡೆಯಲಾಗಿದೆ. 2021 ರಲ್ಲಿ ಜಿಮ್‌ನಲ್ಲಿ ಕಸರತ್ತು ವೇಳೆ ಭುಜದ ನೋವಿಗೆ ತುತ್ತಾದೆ. ಚಿಕಿತ್ಸೆಯ ರೂಪದಲ್ಲಿ ಔಷಧ ಸೇವಿಸಿದ್ದೇನೆ. ಬಳಿಕ ಗಾಯದಿಂದ ಚೇತರಿಸಿಕೊಂಡೆ. ಇದಾದ ಬಳಿಕ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಂತರ್ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಮತ್ತೆ ಭುಜದ ನೋವು ಕಾಣಿಸಿಕೊಂಡಿತು. ಈ ವೇಳೆ ಅದೇ ಚಿಕಿತ್ಸೆ ಪಡೆದುಕೊಂಡೆ" ಎಂದು ಹೇಳಿದ್ದಾರೆ.