ನವದೆಹಲಿ:ಕ್ರೀಡಾ ಗ್ರಾಮದಲ್ಲಿ(ಗೇಮ್ಸ್ ವಿಲೇಜ್) ಭಾರತೀಯ ಕ್ರೀಡಾಪಟುಗಳ ಸುರಕ್ಷಿತ ವಾಸ್ತವ್ಯ ಮತ್ತು ಸೂಕ್ತ ತರಬೇತಿಗೆ ವ್ಯವಸ್ಥೆ ಕಲ್ಪಿಸಿಕೊಡಲು ಟೋಕಿಯೋ ಒಲಿಂಪಿಕ್ ಆಯೋಜನಾ ಸಮಿತಿ ಕೆಲಸ ಮಾಡುತ್ತಿದೆ ಎಂದು ಭಾರತೀಯ ಒಲಿಂಪಿಕ್ ಸಮಿತಿಗೆ ಬರೆದ ಪತ್ರದಲ್ಲಿ TOCOG ತಿಳಿಸಿದೆ.
ಜಪಾನ್ ಸರ್ಕಾರ ಭಾರತ, ನೇಪಾಳ, ಪಾಕಿಸ್ತಾನ ಸೇರಿದಂತೆ 10 ದೇಶಗಳನ್ನು ಗ್ರೂಪ್ 1 ಎಂದು ವಿಭಜಿಸಿ ಅವುಗಳಿಗೆ ಜಪಾನ್‌ಗೆ ತೆರಳುವ ಮೊದಲು ಏಳು ದಿನಗಳು ಪ್ರತಿದಿನ ಕೊರೊನಾ ಪರೀಕ್ಷೆಗಳನ್ನು ನಡೆಸುವಂತೆ ಸೂಚಿಸಿತ್ತು. ಜಪಾನ್‌ಗೆ ಬಂದ ನಂತರ 3 ದಿನಗಳು ಇತರ ಆಟಗಾರರು, ವ್ಯಕ್ತಿಗಳು, ಇತರ ದೇಶಗಳ ಜನರು, ವಿದೇಶಿ ಕ್ರೀಡಾಪಟುಗಳಿಂದ ದೂರವಿರಬೇಕು, ಸಾಮಾಜಿಕ ಅಂತರವನ್ನು ಅನುಸರಿಸಬೇಕು ಎಂದು ಸೂಚಿಸಿತ್ತು.
ಆದರೆ ಈ ಕ್ರಮವನ್ನು ಖಂಡಿಸಿ ಭಾರತೀಯ ಒಲಿಂಪಿಕ್ ಸಮಿತಿ ಈ ನಿಯಮಗಳು ಅನ್ಯಾಯ ಮತ್ತು ತಾರತಮ್ಯ ಎಸಗಿದಂತಾಗುತ್ತದೆ ಎಂದು IOA ಟೋಕಿಯೋ ಒಲಿಂಪಿಕ್ ಗೇಮ್ಸ್ ಆಯೋಜನೆಯ ಸಂಘಟಕರಿಗೆ ಪತ್ರ ಬರೆದಿತ್ತು. ಅದರಲ್ಲಿ ನಿಮ್ಮ ನೀತಿ ನಿಯಮಾವಳಿಗಳು ಕ್ರೀಡಾಪಟುಗಳ ಸಾಧನೆಯ ಮೇಲೆ ಪ್ರತಿಕೂಲ ಮತ್ತು ಹಾನಿಕಾರಕ ಪರಿಣಾಮ ಬೀರುವುದಿಲ್ಲ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ ಎಂದು ಪತ್ರದಲ್ಲಿ ತಿಳಿಸಿತ್ತು.
ಅಲ್ಲದೆ ನಮ್ಮ ಆಟಗಾರರು ಸ್ಪರ್ಧೆಗಳಿಗೆ 5 ದಿನಗಳ ಮೊದಲು ಮಾತ್ರ ಕ್ರೀಡಾ ಗ್ರಾಮಕ್ಕೆ ಬರಲು ಅನುಮತಿ ನೀಡಲಾಗಿದೆ. ಅಲ್ಲಿಯವರೆಗೆ ಅವರು ಕೋಣೆಗಳಿಗೆ ಸೀಮಿತವಾಗಿರಬೇಕು, ಆದ್ದರಿಂದ 3 ದಿನಗಳು ವ್ಯರ್ಥವಾಗುತ್ತವೆ. ಈ ನಿಯಮಗಳು ಭಾರತೀಯ ಕ್ರೀಡಾಪಟುಗಳಿಗೆ ತುಂಬಾ ಅನ್ಯಾಯವಾಗಲಿದೆ ಎಂದು IOA ಆರೋಪಿಸಿತ್ತು.
ಇದೀಗ ಟೋಕಿಯೋ ಒಲಿಂಪಿಕ್ ಸಂಘಟನಾ ಸಮಿತಿ ಭಾರತೀಯ ಒಲಿಂಪಿಕ್ ಸಮಿತಿ ಪತ್ರಕ್ಕೆ ಉತ್ತರಿಸಿದ್ದು, " ಟೋಕಿಯೋ 2020 ನಿಮ್ಮ ಎನ್ಒಸಿಯ ಕ್ರೀಡಾಪಟುಗಳು ಸೇರಿದಂತೆ ಗ್ರೂಪ್ 1ನ ಇತರೆ 10 ದೇಶಗಳು ಮತ್ತು ಎಲ್ಲಾ 195 ದೇಶಗಳ ಕ್ರೀಡಾಪಟುಗಳು ಕ್ರೀಡಾ ಗ್ರಾಮದಲ್ಲಿ ಹೇಗೆ ಸುರಕ್ಷಿತವಾಗಿರಲು ಮತ್ತು ತರಬೇತಿ ಪಡೆಯಬಹುದು ಎಂಬುದರ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಸಾಧ್ಯವಾದಷ್ಟು ಬೇಗ ಅದನ್ನು ಅಭಿವೃದ್ಧಿಪಡಿಸಿ ನಿಮಗೆ ಮಾಹಿತಿ ನೀಡುತ್ತೇವೆ ಎಂದು IOAಗೆ ಬರೆದಿರುವ ಪತ್ರದಲ್ಲಿ ಸಂಘಟಕರು ತಿಳಿಸಿದ್ದಾರೆ.