ಟೋಕಿಯೋ:ಭಾರತದ ರವಿಕುಮಾರ್ ದಹಿಯಾ 57 ಕೆಜಿ ವಿಭಾಗದ ಕುಸ್ತಿಯ ಫೈನಲ್ ಪಂದ್ಯದಲ್ಲಿ ರಷ್ಯಾದ(ROC) ಜೌರ್ ಉಗುವ್ ವಿರುದ್ಧ ನಡೆದ ರೋಚಕ ಹೋರಾಟದಲ್ಲಿ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಈ ಮೂಲಕ ಭಾರತಕ್ಕೆ ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಭಾರತದ ಎರಡನೇ ಕುಸ್ತಿಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ 4-7 ರ ಅಂತರದಲ್ಲಿ ಜೌರ್ ಉಗುವ್ ವಿರುದ್ಧ ಸೋಲು ಕಂಡರು. ರಷ್ಯಾದ ಕುಸ್ತಿಪಟು ಆರಂಭದಿಂದ ಅಂತ್ಯದವರೆಗೂ ಭಾರತೀಯನ ಮೇಲೆ ಪ್ರಾಬಲ್ಯ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.
ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ 2ನೇ ಭಾರತೀಯ:
ರವಿ ಕುಮಾರ್ ಬೆಳ್ಳಿ ಗೆಲ್ಲುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಪದಕ ತಂದುಕೊಡುತ್ತಿರುವ ದೇಶದ ಐದನೇ ಭಾರತೀಯ ಕುಸ್ತಿಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. 1952ರಲ್ಲಿ ಕೆ.ಡಿ ಜಾಧವ್, ಸುಶೀಲ್ ಕುಮಾರ್(2008 ಮತ್ತು 2012), ಯೋಗೇಶ್ವರ್ ದತ್(2012) ಮತ್ತು ಸಾಕ್ಷಿ ಮಲಿಕ್(2016)ರಲ್ಲಿ ಭಾರತಕ್ಕೆ ಈ ಹಿಂದಿನ ಒಲಿಂಪಿಕ್ಸ್ಗಳಲ್ಲಿ ಪದಕ ತಂದುಕೊಟ್ಟಿದ್ದರು. ಸುಶೀಲ್ ಕುಮಾರ್ ನಂತರ ಫೈನಲ್ ತಲುಪಿದ 2ನೇ ಕುಸ್ತಿಪಟು ಜತೆಗೆ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ 2ನೇ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು.