ಟೋಕಿಯೋ: ಭಾರತ ಒಲಿಂಪಿಕ್ಸ್ನ 14ನೇ ದಿನ 2 ಪದಕ ಗೆಲ್ಲುವ ಮೂಲಕ ಕೋಟ್ಯಂತರ ಭಾರತೀಯರ ಸಂಭ್ರಮಕ್ಕೆ ಕಾರಣರಾಗಿದ್ದಾರೆ. ಇದೀಗ 15ನೇ ದಿನವೂ ಪದಕದ ಮೇಲೆ ಭಾರಿ ನಿರೀಕ್ಷೆಯಿದ್ದು ಬಜರಂಗ್ ಪೂನಿಯಾ ಶುಕ್ರವಾರ ಅಕಾಡಕ್ಕಿಳಿಯಲಿದ್ದಾರೆ.
ಶುಕ್ರವಾರ ಭಾರತೀಯರು ಪದಕ ನಿರೀಕ್ಷಿಸಬಹುದಾದ ಕ್ರೀಡಾಪಟುಗಳು
ಬಜರಂಗ್ ಪೂನಿಯಾ
65 ಕೆಜಿ ವಿಭಾಗದಲ್ಲಿ ವಿಶ್ವದ 2ನೇ ಶ್ರೇಯಾಂಕದ ಕುಸ್ತಿಪಟು ಬಜರಂಗ್ ಪೂನಿಯಾ ಶುಕ್ರವಾರ ತಮ್ಮ ಒಲಿಂಪಿಕ್ಸ್ ಅಭಿಯಾನ ಆರಂಭಿಸಲಿದ್ದಾರೆ. ಅವರು ತಮ್ಮ ಮೊದಲ ಪಂದ್ಯದಲ್ಲಿ ಕಿರ್ಗಿಸ್ತಾನದ ಅಕ್ಮತಲೀವ್ ಅವರ ಸವಾಲನ್ನು ಎದುರಿಸಲಿದ್ದಾರೆ. ಮಂಡಿ ಗಾಯದ ಹೊರತಾಗಿಯೂ ಮೂರು ಬಾರಿ ವಿಶ್ವಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದಿರುವ ಪೂನಿಯಾ ಮೇಲೆ ಟೋಕಿಯೋದಲ್ಲಿ ಚಿನ್ನದ ಪದಕದ ನಿರೀಕ್ಷೆಯಿದೆ.
ಭಾರತ ಮಹಿಳಾ ಹಾಕಿ ತಂಡದಿಂದ ಕಂಚಿನ ಪದಕಕ್ಕೆ ಪೈಪೋಟಿ
ಮೊದಲ 3 ಪಂದ್ಯಗಳನ್ನು ಸೋಲು ಕಂಡರೂ ಅದ್ಭುತವಾಗಿ ತಿರುಗಿ ಬಿದ್ದು, ಲೀಗ್ನಲ್ಲಿ 2 ಪಂದ್ಯ ಹಾಗೂ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾಗೆ ಸೋಲಿನ ರುಚಿ ತೋರಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ, ಉಪಾಂತ್ಯದಲ್ಲಿ ಅರ್ಜೆಂಟೀನಾ ವಿರುದ್ಧ 2-1ರಲ್ಲಿ ಸೋಲು ಕಾಣುವ ಮೂಲಕ ಚೊಚ್ಚಲ ಬಾರಿ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಇದೀಗ ಭಾರತದ ವನಿತೆಯರು ಶುಕ್ರವಾರ 2016ರ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ಇಂಗ್ಲೆಂಡ್ ವಿರುದ್ಧ ಕಂಚಿನ ಪದಕಕ್ಕೆ ಪೈಪೋಟಿ ನಡೆಸಲಿದ್ದಾರೆ.
ಪುರುಷರ 4x400 ಮೀಟರ್ ರಿಲೆ
ಅಮೋಜ್ ಜಾಕೋಬ್, ನಾಗನಾಥನ್ ಪಾಂಡಿ, ಅರೋಕಿಯಾ ರಾಜೀವ್, ನಿರ್ಮಾ ನಾಹ್ ತೋಮ್ ಮತ್ತು ಮುಹಮ್ಮದ್ ಅನಾಸ್ ಪುರುಷರ 4x400 ಮೀಟರ್ ರಿಲೇ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ಇಂಟರ್ ಸ್ಟೇಟ್ ಚಾಂಪಿಯನ್ಶಿಪ್ ವೇಳೆ ಒಲಿಂಪಿಕ್ಸ್ ಅರ್ಹತೆಗೆ ನಿಗದಿ ಪಡಿದಿದ್ದ ಈ ತಂಡ ಒಲಿಂಪಿಕ್ಸ್ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದೆ.
ಇದನ್ನು ಓದಿ:ಬೆಳ್ಳಿ ತೃಪ್ತಿ ತಂದಿಲ್ಲ, ದೇಶ ಹೆಮ್ಮೆ ಪಡುವಂತೆ ಚಿನ್ನ ಗೆಲ್ಲಲು ಭವಿಷ್ಯದಲ್ಲಿ ಪ್ರಯತ್ನಿಸುತ್ತೇನೆ: ರವಿ ದಹಿಯಾ