ಟೋಕಿಯೊ: ವಿಶ್ವವೇ ಎದುರು ನೋಡುತ್ತಿದ್ದ ಟೋಕಿಯೋ ಒಲಿಂಪಿಕ್ಸ್ 2021 ಇಂದಿನಿಂದ ಪ್ರಾರಂಭವಾಗಲಿದೆ. ಉದ್ಘಾಟನಾ ಸಮಾರಂಭಕ್ಕಿಂತ ಮೊದಲೇ ಭಾರತ ತನ್ನ ಅಭಿಯಾನ ಆರಂಭ ಮಾಡಿದೆ. ಭಾರತದ ಆರ್ಚರ್ಗಳಾದ ದೀಪಿಕಾ ಕುಮಾರಿ ಮತ್ತು ಅತನು ದಾಸ್ ಮೊದಲ ದಿನ ಅಖಾಡಕ್ಕಿಳಿದಿದ್ದಾರೆ. ಇದೀಗ ಆರ್ಚರಿಯಲ್ಲಿ ಭಾರತದ ವೈಯಕ್ತಿಕ ರ‍್ಯಾಂಕಿಂಗ್ ಸುತ್ತಿನಲ್ಲಿ ದೀಪಿಕಾ ಕುಮಾರಿ 663 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದ ದೀಪಿಕಾ, ಬಳಿಕ ಕೊಂಚ ಕುಸಿದರು.
ಅಂತಿಮ ಸೆಟ್: X= 10-9-9-9-7
ಆರ್ಚರಿ ಕ್ರೀಡೆಯ ಪಟ್ಟಿಯಲ್ಲಿ ದಕ್ಷಿಣ ಕೊರಿಯಾದ ಆಟಗಾರರಾದ ಆನ್ ಸ್ಯಾನ್, ಜಾಂಗ್ ಮಿನ್ಹೀ ಮತ್ತು ಕಾಂಗ್ ಚೆಯೌಂಗ್ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಮುಂದಿನ ಸುತ್ತನ್ನು ದೀಪಿಕಾ, ಭೂತಾನ್‌ನ ಬಿಟಿ ಕರ್ಮ ವಿರುದ್ಧ ಆಡಲಿದ್ದಾರೆ.
ದೀಪಿಕಾ ಮೊದಲಾರ್ಧದಲ್ಲಿ 334 ಪಾಯಿಂಟ್‌ಗಳಲ್ಲಿ ಪ್ರಬಲ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದರು. ಆ ಬಳಿಕ ಆಕೆಯ ನಿಧಾನಗತಿಯ ಪ್ರದರ್ಶನದಿಂದಾಗಿ ಒಂಬತ್ತನೇ ಸ್ಥಾನಕ್ಕೆ ಕುಸಿದರು. ಲಂಡನ್ ಮತ್ತು ರಿಯೋ ಒಲಿಂಪಿಕ್ಸ್ನಲ್ಲಿ ದೀಪಿಕಾ ಕುಮಾರಿ ನಿರೀಕ್ಷಿತ ಸಾಧನೆ ಮಾಡಿರಲಿಲ್ಲ.
ಮೊದಲ ಸುತ್ತಿನಲ್ಲಿ ಭೂತಾನ್‌ನ ಭೂ ಕರ್ಮಾ ಎದುರಾಳಿ:
ಮೊದಲ ಎಲಿಮಿನೇಷನ್ ಸುತ್ತಿನಲ್ಲಿ ಭಾರತದ ನಂ 1 ಆರ್ಚರ್ ದೀಪಿಕಾ ಕುಮಾರಿ ಭೂತಾನ್‌ನ ಭೂ ಕರ್ಮಾ ಅವರನ್ನು ಎದುರಿಸಲಿದ್ದಾರೆ. ಮಹಿಳೆಯರ ವೈಯುಕ್ತಿಕ ವಿಭಾಗದಲ್ಲಿ ದೀಪಿಕಾ ಕುಮಾರಿ 9ನೇ ಶ್ರೇಯಾಂಕ ಹೊಂದಿದ್ದಾರೆ. ಭೂ ಕರ್ಮಾ ರ್ಯಾಂಕ್ ಪಟ್ಟಿಯಲ್ಲಿ 56ನೇ ಸ್ಥಾನದಲ್ಲಿದ್ದಾರೆ. ಈ ಪಂದ್ಯ ಜುಲೈ 28ರಂದು ನಡೆಯಲಿದೆ.
15 ದಿನಗಳ ಕ್ರೀಡಾ ಪ್ರದರ್ಶನದ 1ನೇ ದಿನದಂದು ಎರಡು ಕ್ರೀಡೆಗಳು ನಡೆಯಲಿವೆ. ಅವುಗಳೆಂದರೆ ಆರ್ಚರಿ ಮತ್ತು ರೋಯಿಂಗ್. ಇವು ಉದ್ಘಾಟನಾ ಸಮಾರಂಭದ ಮೊದಲು ನಡೆಯುತ್ತಿವೆ. ಸಾಫ್ಟ್ಬಾಲ್ ಮತ್ತು ಫುಟ್ಬಾಲ್ ಪಂದ್ಯಗಳೂ ಉದ್ಘಾಟನಾ ಸಮಾರಂಭಕ್ಕಿಂತ ಮೊದಲೇ ಆರಂಭವಾಗಿವೆ.