ನವದೆಹಲಿ:ಕೇವಲ ಸರ್ಕಾರಿ ಕೆಲಸ ಪಡೆದು ಜೀವನದಲ್ಲಿ ನೆಲೆಕಂಡುಕೊಳ್ಳುವ ಸಲುವಾಗಿ ಗ್ಲೌಸ್ ತೊಟ್ಟು ರಿಂಗ್ಗೆ ಇಳಿದಿದ್ದ ವಿಜೇಂದರ್ ಸಿಂಗ್ ಭಾರತದ ಬಾಕ್ಸಿಂಗ್ ಲೋಕದ ದಂತ ಕಥೆಯಾಗಿ ಬದಲಾದರು.
2008ರ ಈ ದಿನ ವಿಜೇಂದರ್ ಸಿಂಗ್ ಅವರ ಸಾಧನೆಯನ್ನು ಇಡೀ ಭಾರತ ಕಣ್ತುಂಬಿಕೊಂಡಿತ್ತು. ಬಾಕ್ಸಿಂಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಪದಕ ಮುಡಿಗೇರಿಸಿಕೊಂಡ ವಿಜೇಂದರ್ ಸಿಂಗ್ ಭಾರತೀಯರ ಮನೆಮಾತಾದರು.
ಹಲವಾರು ಒಲಿಂಪಿಕ್ಸ್ಗಳಲ್ಲಿ ಭಾರತದ ಬಾಕ್ಸರ್ಗಳು ಅವಕಾಶ ಪಡೆದರೂ ಪದಕಕ್ಕಾಗಿ ಕಾಯುವಿಕೆ ತುಂಬಾ ವರ್ಷಗಳ ಕಾಲ ಮುಂದುವರಿದಿತ್ತು. ಆದರೆ ಆರಡಿ ಎತ್ತರದ ವಿಜೇಂದರ್ ಸಿಂಗ್ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನು ಎತ್ತಿ ಹಿಡಿಯುವ ಮೂಲಕ ಭಾರತಕ್ಕೆ ಪದಕ ತಂದುಕೊಟ್ಟಿದ್ದರು.
ವಿಶೇಷವೆಂದರೆ ಆ ಒಲಿಂಪಿಕ್ಸ್ನಲ್ಲಿ ಭಾರತದ ಅಖಿಲ್ ಕುಮಾರ್ ಮೇಲೆ ಪದಕದ ನಿರೀಕ್ಷೆ ಬಲವಾಗಿತ್ತು. ಅದಕ್ಕೆ ತಕ್ಕಂತೆ ಅವರೂ ಕೂಡ ವಿಶ್ವದ ನಂಬರ್ ಒನ್ ಶ್ರೇಯಾಂಕದ ಬಾಕ್ಸರ್ಗೆ ಮಣ್ಣು ಮುಕ್ಕಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಆದರೆ ಕ್ವಾರ್ಟರ್ ಫೈನಲ್ನಲ್ಲಿ ಸೋಲನುಭವಿಸಿ ನಿರಾಶೆ ಮೂಡಿಸಿದ್ದರು.
ಅದೇ ಸಂದರ್ಭದಲ್ಲಿ ಅಭಿನವ್ ಬಿಂದ್ರಾ 10 ಮೀಟರ್ ರೈಫಲ್ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದರು. ನಂತರ ಸುಶಿಲ್ ಕುಮಾರ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದರು. ಇದರ ನಂತರ ಕೋಟ್ಯಾಂತರ ಭಾರತೀಯರ ಭರವಸೆ ವಿಜೇಂದರ್ ಕಡೆ ತಿರುಗಿತು. ಆದರೆ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿದ ವಿಜೇಂದರ್ ಸಿಂಗ್ ಈಕ್ವೆಡಾರ್ನ ಕಾರ್ಲೋಸ್ ಗೊಂಗರ ಅವರನ್ನು ಮಣಿಸಿ ಬಾಕ್ಸಿಂಗ್ ಇತಿಹಾಸದಲ್ಲೇ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು.
ಅಂದು ಕಂಚಿನ ಪದಕ ಪಡೆದರೂ ಇವರ ಸಾಧನೆ ಭಾರತದ ಬಾಕ್ಸಿಂಗ್ ಲೋಕದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತು. ಇವರ ಬೆನ್ನಲ್ಲೇ ಭಾರತದ ಮಹಿಳಾ ಲೆಜೆಂಡ್ ಮೇರಿಕೋಮ್ 2012ರ ಆವೃತ್ತಿಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇದೀಗ ಪ್ರಸ್ತುತ ಮೂರಕ್ಕೂ ಹೆಚ್ಚು ಬಾಕ್ಸರ್ಗಳು 2021ರ ಒಲಿಂಪಿಕ್ಸ್ಗೆ ನೇರ ಅರ್ಹತೆ ಪಡೆದಿದ್ದಾರೆ.
ವಿಜೇಂದರ್ ಸಿಂಗ್ ಅವರ ಸಹೋದರ ಮನೋಜ್ ಕುಮಾರ್ ಬಾಕ್ಸಿಂಗ್ನಲ್ಲಿದ್ದದ್ದರಿಂದ ಸೇನೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಇದೇ ಕಾರಣದಿಂದ ಬಾಕ್ಸಿಂಗ್ಗೆ ಎಂಟ್ರಿಕೊಟ್ಟಿದ ವಿಜೇಂದರ್ ಸಿಂಗ್ ಬಾಕ್ಸಿಂಗ್ ಅನ್ನೇ ಉಸಿರಾಗಿಸಿಕೊಂಡರು ಎನ್ನುವುದು ಇತಿಹಾಸ. ಸದ್ಯಕ್ಕೆ ಅಮೆಚೂರ್ ಬಾಕ್ಸಿಂಗ್ ಬಿಟ್ಟು ವೃತ್ತಿಪರ ಬಾಕ್ಸಿಂಗ್ನಲ್ಲಿ ಮಿಂಚುತ್ತಿರುವ ವಿಜೇಂದರ್ ಸಿಂಗ್ ಸೋಲಿಲ್ಲದ ಸರದಾರನಂತೆ ಮಿಂಚುತ್ತಿದ್ದಾರೆ.