ಯುಜೀನ್(ಯುಎಸ್ಎ):ಎರಡು ಬಾರಿಯ ಒಲಿಂಪಿಕ್ಸ್ ಮಹಿಳಾ ಚಾಂಪಿಯನ್ ಆಗಿರುವ ಜಮೈಕಾದ ಎಲೈನ್ ಥಾಂಪ್ಸನ್ ಹೆರಾ ವಂಡಾ ಡೈಮಂಡ್ ಲೀಗ್ನಲ್ಲಿ 100 ಮೀಟರ್ ಓಟವನ್ನು 10.54 ಸೆಕೆಂಡ್ಗಳಲ್ಲಿ ಕ್ರಮಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ.
ಅಮೆರಿಕಾದ ಫ್ಲಾರೆನ್ಸ್ ಗ್ರಿಫಿತ್ ಜೋಯ್ನರ್ ಬಳಿಕ 100 ಮೀಟರ್ ದೂರವನ್ನು ಅತಿ ಕಡಿಮೆ ಸಮಯದಲ್ಲಿ ತಲುಪಿದ ಓಟಗಾರ್ತಿ ಎಂಬ ದಾಖಲೆಗೆ ಶನಿವಾರ ಹೆರಾ ಪಾತ್ರರಾಗಿದ್ದಾರೆ. 1988ರಲ್ಲಿ ಜೋಯ್ನರ್ 100 ಮೀಟರ್ ಓಟದ ಸ್ಪರ್ಧೆಯಲ್ಲಿ 10.49 ಸೆಕೆಂಡ್ಗಳಲ್ಲಿ ತಲುಪಿದ್ದು ಈಗಲೂ ವಿಶ್ವದಾಖಲೆಯಾಗಿದೆ.
ಶನಿವಾರ ನಡೆದ ಸ್ಪರ್ಧೆಯಲ್ಲಿ ಎಲೈನ್ ತಮ್ಮ ಜೊತೆಗೆ ಟೋಕಿಯೊದಲ್ಲಿ ಪೋಡಿಯಂ ಏರಿದ್ದ ತಮ್ಮದೇ ದೇಶದ ಪ್ರತಿಸ್ಪರ್ಧಿಗಳನ್ನು ಮತ್ತೆ ಮಣಿಸಿ ದಾಖಲೆ ಬರೆದರು. ಎಲೈನ್ ಈ ಹಿಂದೆ 10.61 ಸೆಕೆಂಡ್ಗಳಲ್ಲಿ ತಲುಪಿದ್ದು, ಅತ್ಯುತ್ತಮ ಪ್ರದರ್ಶನವಾಗಿತ್ತು.
2008 ಮತ್ತು 2012ರ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆಯಾಗಿರುವ ಶೆಲ್ಲಿ ಆನ್ ಫ್ರೇಸೆರ್ 10.63 ಸೆಕೆಂಡ್ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದರೆ, ಶೆರಿಕಾ ಜಾಕ್ಸನ್ 10.76 ಸೆಕೆಂಡ್ಗಳಲ್ಲಿ ತಲುಪಿ ಕಂಚಿನ ಪದಕ ಪಡೆದಿದ್ದಾರೆ. ಜಮೈಕಾದ ಈ ಮೂವರು ಟೋಕಿಯೊದಲ್ಲೂ ಮೂರೂ ಪದಕಗಳನ್ನು ಬಾಚಿಕೊಂಡಿದ್ದರು.
ಇದನ್ನು ಓದಿ:10,000 ಮೀ. ನಡಿಗೆ ಸ್ಪರ್ಧೆಯಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಭಾರತದ ಅಮಿತ್ ಖತ್ರಿ