ಟೆನಿಸ್ ಲೋಕದ ದಿಗ್ಗಜ, 20 ಗ್ರ್ಯಾಂಡ್ಸ್ಲ್ಯಾಮ್ಗಳ ಒಡೆಯ ರೋಜರ್ ಫೆಡರರ್ ಟೆನಿಸ್ ಅಂಗಳದಿಂದ ಹಿಂದೆ ಸರಿದಿದ್ದಾರೆ. ಮುಂದಿನ ವಾರ ಲಂಡನ್‌ನಲ್ಲಿ ನಡೆಯಲಿರುವ ಲೇವರ್ ಕಪ್ ನಂತರ ಅಧಿಕೃತವಾಗಿ ಟೆನ್ನಿಸ್ ಅಂಗಳದಿಂದ ನಿವೃತ್ತಿ ಹೊಂದುವುದಾಗಿ 41 ವರ್ಷದ ಟೆನ್ನಿಸ್ ಪಟು ರೋಜರ್ ಫೆಡರರ್ ಟ್ವೀಟ್ ಮಾಡಿದ್ದಾರೆ.
ವಿದಾಯದ ಬರಹವುಳ್ಳ ಎರಡು ಪುಟಗಳನ್ನು ಪೋಸ್ಟ್ ಮಾಡಿರುವ ರೋಜರ್, ಟೆನ್ನಿಸ್‌ನೊಂದಿಗಿನ ಸಂಬಂಧವನ್ನು ಮುಂದುವರೆಸುವೆ. ಆದರೆ ಲಂಡನ್‌ನಲ್ಲಿ ನಡೆಯುವ ಲೇವರ್ ಕಪ್ ನನ್ನ ವೃತ್ತಿಯ ಕೊನೆಯ ಟೂರ್ನಿಯಾಗಲಿದೆ ಎಂದು ಹೇಳಿದ್ದಾರೆ.
'ಕಳೆದ ಮೂರು ವರ್ಷಗಳಲ್ಲಿ ಗಾಯದ ಸಮಸ್ಯೆ, ಶಸ್ತ್ರಚಿಕಿತ್ಸೆಗಳ ಗೋಜಿಲಿನಿಂದ ಬಳಲಿದ್ದೇನೆ. ಸಂಪೂರ್ಣವಾಗಿ ಚೇತರಿಸಿಕೊಂಡು ಸ್ಪರ್ಧಾತ್ಮಕ ಜಗತ್ತಿಗೆ ಮರಳಲು ಇಚ್ಛಿಸಿದ್ದೆ. ಆದರೆ, ನನ್ನ ದೇಹ ಸಹಕರಿಸುತ್ತಿಲ್ಲ. ಅದರ ಇತಿಮಿತಿಗಳು ನನಗೆ ತಿಳಿದಿದೆ. ನನಗೀಗ 41 ವರ್ಷ' ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
'24 ವರ್ಷಗಳಲ್ಲಿ 1,500 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಟೆನಿಸ್ ಲೋಕ ನಾನಂದುಕೊಂಡಿದ್ದಕ್ಕಿಂತ ಹೆಚ್ಚೇ ನನ್ನನ್ನು ಬಿಗಿದಪ್ಪಿದೆ. ಈ ಸಮಯ ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸಲು ಸುಸಮಯ ಎಂಬುದನ್ನು ಅರಿತುಕೊಂಡಿದ್ದೇನೆ. ಭವಿಷ್ಯದಲ್ಲಿ ಟೆನಿಸ್ ಆಡಿದರೂ, ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿ ಭಾಗವಹಿಸುವುದಿಲ್ಲ' ಎಂದು ತಿಳಿಸಿದ್ದಾರೆ.