ನವದೆಹಲಿ: ಟ್ವಿಟರ್‌ನ ಹೊಸ ನೀತಿಯಂತೆ ದೇಶದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್, ಪಿ.ವಿ.ಸಿಂಧು, ಸೈನಾ ನೆಹ್ವಾಲ್, ನೀರಜ್ ಚೋಪ್ರಾ ಅವರಂತಹ ಅನೇಕರ ಟ್ವಿಟರ್ ಹ್ಯಾಂಡಲ್‌ಗಳಿಂದ ಬ್ಲೂ ಟಿಕ್ ಅನ್ನು ತೆಗೆದುಹಾಕಲಾಗಿದೆ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಖಾತೆಯ ಗುರುತಿಸುವಿಕೆಗಾಗಿ ಸೆಲೆಬ್ರಿಟಿಗಳಿಗೆ ನಿಲಿ ಮಾರ್ಕ್ನ ಗುರುತನ್ನು ಉಚಿತವಾಗಿ ಈ ಮೊದಲು ನೀಡಲಾಗುತ್ತಿತ್ತು.
ಎಲೋನ್ ಮಸ್ಕ್ ಒಡೆತನದ ಟ್ವಿಟರ್‌ನಲ್ಲಿ ಇತ್ತೀಚೆಗೆ ಹಲವು ಬದಲಾವಣೆಗಳನ್ನು ಮಾಡಿದ್ದು, ಯಾವುದೇ ವ್ಯಕ್ತಿಯ ಪ್ರೊಫೈಲ್‌ನೊಂದಿಗೆ ಪರಿಶೀಲಿಸಲಾದ ನೀಲಿ ಟಿಕ್ ಮಾರ್ಕ್ ಪಡೆಯಲು ಅಥವಾ ಉಳಿಸಿಕೊಳ್ಳಲು, ಟ್ವಿಟರ್ ಸದಸ್ಯತ್ವ ಪಡೆಯಬೇಕು ಎಂದು ಘೋಷಿಸಲಾಗಿತ್ತು. ಇದಕ್ಕಾಗಿ ನಿಗದಿತ ಶುಲ್ಕವನ್ನು ಮಸ್ಕ್ ಅವರೇ ತಿಳಿಸಿದ್ದರು. ಹಣ ಕೊಟ್ಟ ಖಾತೆಗಳಿಗೆ ವಿಶೇಷ ಸೌಲಭ್ಯಗಳನ್ನು ಕೊಡುವ ಬಗ್ಗೆ ಮತ್ತು ಆದಾಯ ಗಳಿಕೆಗೆ ದಾರಿ ಮಾಡಿಕೊಡುವುದಾಗಿ ಅವರು ತಿಳಿಸಿದ್ದರು.
ಇಂದಿನಿಂದ ಈ ಚಂದಾದಾರಿಕೆಯ ನಿಯಮ ಜಾರಿಗೆ ಬಂದಿದೆ. ಟ್ವಿಟರ್‌ಗೆ ಚಂದಾದಾರರಾಗದಿರುವ ಆಟಗಾರರು ಅಥವಾ ಉನ್ನತ ಪ್ರೊಫೈಲ್ ವ್ಯಕ್ತಿಗಳ ಟ್ವಿಟರ್ ಹ್ಯಾಂಡಲ್‌ನಿಂದ ಬ್ಲೂ ಟಿಕ್ ತೆಗೆದು ಹಾಕಲಾಗಿದೆ. ಹೀಗಾಗಿ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್, ಕೆ.ಎಲ್.ರಾಹುಲ್, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಶಿಖರ್ ಧವನ್, ಯುಜ್ವೇಂದ್ರ ಚಹಾಲ್ ಮತ್ತು ಕಪಿಲ್ ದೇವ್, ರವಿಶಾಸ್ತ್ರಿ ಮತ್ತು ಸುನಿಲ್ ಗವಾಸ್ಕರ್ ಅವರ ಖಾತೆಯ ಗುರುತನ್ನು ತೆಗೆದು ಹಾಕಲಾಗಿದೆ.
ಟೆನಿಸ್ ಶ್ರೇಷ್ಠ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್, ಫುಟ್ಬಾಲ್ ಆಟಗಾರರಾದ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಕೈಲಿಯನ್ ಎಂಬಪ್ಪೆ, ಬಾಸ್ಕೆಟ್‌ಬಾಲ್ ದಂತಕಥೆ ಸ್ಟೀಫನ್ ಕರಿ ಅವರ ಖಾತೆಗಳೂ ಸಹ ವೆರಿಫೈಡ್ ಗುರುತು ಕಳೆದುಕೊಂಡಿದೆ.