ಕಾಸರಗೋಡು(ಕೇರಳ):ಅಭಿಮಾನವೇ ಹಾಗೆ. ನೆಚ್ಚಿನ ಆಟಗಾರ, ತಂಡ ಸೋತಲ್ಲಿ ಮನಸ್ಸು ನೊಂದು ಕಣ್ಣೀರಾಗುತ್ತದೆ. ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನಲ್ಲಿ ಮೊದಲ ಪಂದ್ಯದಲ್ಲೇ ವಿಶ್ವಶ್ರೇಷ್ಠ ತಂಡವಾದ ಅರ್ಜೆಂಟೀನಾ, ಸೌದಿ ಅರೇಬಿಯಾ ವಿರುದ್ಧ ಸೋತಿದ್ದಕ್ಕೆ ಕೇರಳದ ಪುಟ್ಟ ಅಭಿಮಾನಿ ಕಣ್ಣೀರು ಹಾಕಿದ್ದ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಆ ಅಭಿಮಾನಿ ನೇರವಾಗಿ ತನ್ನ ಕನಸಿನ ತಂಡದ ಆಟಗಾರರನ್ನು ಭೇಟಿಯಾಗಲು ಕತಾರ್ಗೆ ಹಾರಲಿದ್ದಾನೆ.
ಕಾಸರಗೋಡಿನ 13 ವರ್ಷದ ಬಾಲಕ ನಿಬ್ರಾಸ್, ವಿಶ್ವಶ್ರೇಷ್ಠ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ ತಂಡದ ಕಟ್ಟಾಭಿಮಾನಿ. ವಿಶ್ವಕಪ್ನ ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಅರ್ಜೆಂಟೀನಾ ಸೋಲುಂಡಿದ್ದು ವಿಶ್ವವೇ ಅಚ್ಚರಿಗೊಳಗಾಗಿತ್ತು. ಇದು ತಂಡದ ಅಭಿಮಾನಿಗಳಿಗೆ ಇನ್ನಿಲ್ಲದ ಶಾಕ್ ನೀಡಿತ್ತು. ಕೇರಳದ ಕಾಸರಗೋಡಿನ ನಿಬ್ರಾಸ್ ಕೂಡ ಸೋಲನ್ನು ಅರಗಿಸಿಕೊಳ್ಳಲಾಗದೇ ಕಣ್ಣೀರು ಹಾಕಿದ್ದ. ಮುಂದಿನ ಪಂದ್ಯಗಳಲ್ಲಿ ತಂಡ ಗೆಲ್ಲಲಿದೆ. ಮೆಸ್ಸಿ ಹ್ಯಾಟ್ರಿಕ್ ಗೋಲು ಬಾರಿಸಲಿದ್ದಾನೆ ಎಂಬ ನಿಬ್ರಾಸ್ ಕಣ್ಣೀರಿನ ಅಭಿಮಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.