ಕೊಯಮತ್ತೂರು (ತಮಿಳುನಾಡು): ಸಾಧನೆಗೆ ಛಲ ಮುಖ್ಯ. ಬಡತನ, ಕಷ್ಟ ಯಾವುದೂ ಅಡ್ಡಿ ಬರಲ್ಲ ಅನ್ನೋದನ್ನು ಕೆಲವರು ಈಗಾಗಲೇ ಸಾಬೀತು ಮಾಡಿದ್ದಾರೆ. ಇದೀಗ ತಮಿಳುನಾಡಿನ ಇಬ್ಬರು ಮಕ್ಕಳ ತಾಯಿ ಪವರ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ತಾನು ವಾಸವಾಗಿರುವ ಸ್ಥಳದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಕೆಲಸ ಮಾಡುವ ಇಬ್ಬರು ಮಕ್ಕಳ ತಾಯಿ ಮಾಸಿಲಮಣಿ ರಮೇಶ್(40) ಇದೀಗ ತಿರುಚ್ಚಿಯಲ್ಲಿ ನಡೆದ ರಾಜ್ಯ ಮಟ್ಟದ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಇತರೆ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಮಾಸಿಲಮಣಿ ರಮೇಶ್ ಮಗಳು ಧರಣಿ(17) ಸರ್ಕಾರಿ ಕಾಲೇಜ್ನಲ್ಲಿ ಪ್ಲಸ್ ಒನ್ ವಿಭಾಗದಲ್ಲಿ ವ್ಯಾಸಂಗ ಮಾಡ್ತಿದ್ದು, ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಎರಡು ಮಕ್ಕಳ ತಾಯಿ ಪವರ್ ಲಿಫ್ಟರ್ ತಮಿಳುನಾಡು ಪವರ್ಲಿಫ್ಟಿಂಗ್ ಅಸೋಷಿಯೇಷನ್ ಆಯೋಜನೆ ಮಾಡಿದ್ದ ಸ್ಪರ್ಧೆಯಲ್ಲಿ ಮಾಸಿಲಮಣಿ 63 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದು, ಇವರ ಪುತ್ರಿ ಧರಣಿ 47 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಇದೀಗ ಸೆಪ್ಟೆಂಬರ್ 14ರಿಂದ ಚೆನ್ನೈನಲ್ಲಿ ಆರಂಭಗೊಳ್ಳಲಿರುವ ಟೂರ್ನಿಯ ಮೇಲೆ ಇಬ್ಬರು ಕಣ್ಣಿಟ್ಟಿದ್ದಾರೆ.
ಬಡತನದಲ್ಲಿ ಅರಳಿದ ಪ್ರತಿಭೆ: ಮಾಸಿಲಮಣಿ ಕಡು ಬಡತನದಲ್ಲಿ ಅರಳಿರುವ ಪ್ರತಿಭೆ. ಕುಣಿಯಮುತ್ತೂರು ಬಳಿಯ ರಾಮಾನುಜಂ ನಗರದಲ್ಲಿ ಚಿಕ್ಕ ತಗಡಿನ ಶೆಡ್ನಲ್ಲಿ ವಾಸವಿರುವ ಇವರು, ಅಕ್ಕಪಕ್ಕದ ಮನೆಗಳಲ್ಲಿ ಕೆಲಸ ಮಾಡುತ್ತಾರೆ. ಪತಿ ರಮೇಶ್ ದಿನಗೂಲಿ ಕೆಲಸಗಾರ. ದಂಪತಿಯ ಹಿರಿಯ ಮಗಳು ದರ್ಶಿನಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಗ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಎರಡನೇ ಮಗಳು ಧರಣಿ ಮಾತ್ರ ತಾಯಿಯ ಹಾದಿ ತುಳಿದಿದ್ದಾರೆ.
ಚಿನ್ನದ ಪದಕ ಗೆದ್ದು ಛಾಪು ಮೂಡಿಸಿದ ಬಡ ಮಹಿಳೆ ಮಾಸಿಲಮಣಿ ವೇಟ್ ಲಿಫ್ಟರ್ ಆಗಿದ್ದು ಹೇಗೆ?: ಅಕ್ಕಪಕ್ಕದ ಮನೆಗಳಲ್ಲಿ ಸಹಾಯಕಿಯಾಗಿ ಕೆಲಸ ಮಾಡ್ತಿದ್ದ ಮಾಸಿಲಮಣಿ ಹೆಚ್ಚಿನ ಬೊಜ್ಜು ಹೊಂದಿದ್ದಾರೆ. ಕಳೆದ ಆರು ತಿಂಗಳ ಹಿಂದೆ ತೂಕ ಇಳಿಸಿಕೊಳ್ಳುವ ಉದ್ದೇಶದಿಂದ ಆ ಪ್ರದೇಶದಲ್ಲಿನ ಜಿಮ್ಗೆ ಹೋಗಲು ಶುರು ಮಾಡುತ್ತಾರೆ. ಅದಕ್ಕೋಸ್ಕರ ತಾವು ಕೆಲಸ ಮಾಡ್ತಿದ್ದ ಮನೆಯ ಮಾಲೀಕ ಹಣ ನೀಡಿದ್ದರು. ಆಗಿನಿಂದ ಅವರ ಜೀವನದಲ್ಲಿ ಮಹತ್ವದ ತಿರುವು ಪ್ರಾರಂಭವಾಗುತ್ತದೆ.
ಇದನ್ನೂ ಓದಿ:ಬಡತನದಲ್ಲಿ ಅರಳಿದ ಪ್ರತಿಭೆ : ಕುಸ್ತಿಯಲ್ಲಿ ಭಾರತಕ್ಕೆ ಚಿನ್ನ ತಂದ ಬೆಣ್ಣೆನಗರಿಯ ಪೈಲ್ವಾನ್
ಮಾಸಿಲಮಣಿ ಮಾತು:ಮಾಸಿಲಮಣಿ ಬೊಜ್ಜು ಕರಗಿಸಿಕೊಳ್ಳಲು ಹೋಗಿದ್ದ ಜಿಮ್, ಏಷ್ಯನ್ ಗೇಮ್ಸ್ನ ಪವರ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ವಿಜೇತ ಸಿ. ಶಿವಕುಮಾರ್ ಅವರದ್ದು. ಈ ವೇಳೆ ಪವರ್ ಲಿಫ್ಟರ್ ಯಾಕೆ ಆಗಬಾರದು ಎಂದು ಪ್ರಶ್ನೆ ಮಾಡಿದರು. ಅವರ ಮಾತಿನಂತೆ ಈ ನಿರ್ಧಾರ ಕೈಗೊಂಡಿದ್ದು, ನನ್ನ ಕಿರಿಯ ಮಗಳನ್ನೂ ಜಿಮ್ಗೆ ಸೇರಿಸಿಕೊಂಡಿದ್ದಾಗಿ ಹೇಳಿದ್ದಾರೆ. ಇದೀಗ ಜಿಮ್ನಲ್ಲಿ ನಮಗೆ ಯಾವುದೇ ರೀತಿಯ ಶುಲ್ಕ ತೆಗೆದುಕೊಳ್ಳುವುದಿಲ್ಲ ಎಂದು ಸಾಧಕಿ ಹೇಳಿದ್ದಾರೆ.
ಆರಂಭದ ದಿನಗಳಲ್ಲಿ ಸಂಬಂಧಿಕರು, ನೆರೆಹೊರೆಯವರು ನನ್ನ ನಿರ್ಧಾರಕ್ಕೆ ನಗುತ್ತಿದ್ದರು. ಆದರೆ, ಇದೀಗ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನನ್ನ ಕೆಲಸದಿಂದ ಮಾಸಿಕವಾಗಿ 4 ಸಾವಿರ ರೂಪಾಯಿ ಸಂಪಾದಿಸುತ್ತಿದ್ದೇನೆ. ಪತಿ ದಿನಗೂಲಿ ಕೆಲಸ ಮಾಡುವುದರಿಂದ ಪವರ್ಲಿಫ್ಟರ್ಗಳಿಗೆ ಅಗತ್ಯವಿರುವ ಆಹಾರ ಸೇವನೆ ಮಾಡಲು ಸಾಧ್ಯವಾಗ್ತಿಲ್ಲ ಎಂದಿದ್ದಾರೆ. ಮಾಸಿಲಮಣಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ತರಬೇತುದಾರ ಶಿವಕುಮಾರ್, ಚೆನ್ನೈ ಸ್ಪರ್ಧೆಯಲ್ಲಿ ಈ ಸ್ಪರ್ಧಾಳುಗಳು ಉತ್ತಮ ಸಾಧನೆ ಮಾಡಿದರೆ, ಖಂಡಿತವಾಗಿ ಇವರಿಗೆ ಪ್ರಾಯೋಜಕರು ಸಿಗಲಿದ್ದಾರೆ ಎಂದಿದ್ದಾರೆ.