ಚೆನ್ನೈ (ತಮಿಳುನಾಡು) :4ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದ ಹಾಕಿ ಟೀಂ ಇಂಡಿಯಾವನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶ್ಲಾಘಿಸಿದ್ದಾರೆ. ಜೊತೆಗೆ ವಿಜೇತ ತಂಡಕ್ಕೆ 1.1 ಕೋಟಿ ರೂಪಾಯಿ ನಗದು ಬಹುಮಾನವನ್ನೂ ಘೋಷಿಸಿದ್ದಾರೆ.
ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡವು ಮಲೇಷ್ಯಾವನ್ನು 4-3 ಗೋಲುಗಳ ಅಂತರದಿಂದ ಸೋಲಿಸಿ ಇತಿಹಾಸ ಬರೆಯಿತು. ಟೀಂ ಇಂಡಿಯಾಗೆ ಪ್ರಶಸ್ತಿ ವಿತರಿಸಿದ ಸಿಎಂ ಸ್ಟಾಲಿನ್ ಅವರು ಬಳಿಕ Xನಲ್ಲಿ (ಹಿಂದಿನ ಟ್ವಿಟರ್) ಅಭಿನಂದಿಸಿ, ಪ್ರಶಸ್ತಿ ಘೋಷಣೆ ಮಾಡಿದ್ದಾರೆ.
ಅದ್ಭುತ ಹೋರಾಟದ ಮೂಲಕ 4ನೇ ಏಷ್ಯಾ ಚಾಂಪಿಯನ್ಶಿಪ್ ಪ್ರಶಸ್ತಿ ಜಯಿಸಿದ ಭಾರತ ಹಾಕಿ ತಂಡಕ್ಕೆ ಅಭಿನಂದನೆಗಳು. ಇದೊಂದು ಗಮನಾರ್ಹ, ಸಾಹಸ ಮತ್ತು ಸಮರ್ಪಣಾ ಭಾವದ ಪಂದ್ಯವಾಗಿತ್ತು. ಕ್ರೀಡೆ ಮತ್ತು ಪ್ರೀತಿಗೆ ಹೆಸರಾದ ಚೆನ್ನೈನಲ್ಲಿ ಟೂರ್ನಿ ಯಶ ಕಂಡಿದ್ದು, ಸಂತಸ ತಂದಿದೆ. ಟೂರ್ನಿಯನ್ನು ಚೆನ್ನೈನಲ್ಲಿ ಆಯೋಜಿಸಲು ಅನುವು ಮಾಡಿಕೊಟ್ಟ ಕೇಂದ್ರದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಧನ್ಯವಾದಗಳು. ಕ್ರೀಡಾಕೂಟ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಸಚಿವರು, ಕ್ರೀಡಾ ಇಲಾಖೆ ಮತ್ತು ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ.