ಬೆಂಗಳೂರು: ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅವರ ಮನೆಯಲ್ಲಿ ರಕ್ಷಾಬಂಧನ ಸಂತಸ ತಂದಿದೆ. ಭಾರತದ ಪುಟ್ಬಾಲ್ ತಂಡದ ನಾಯಕನಿಗೆ ಗಂಡು ಮಗು ಜನಿಸಿದೆ. ಅವರ ಪತ್ನಿ ಸೋನಂ ಭಟ್ಟಾಚಾರ್ಯ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಸುನೀಲ್ ಮತ್ತು ಅವರ ಪತ್ನಿಯನ್ನು ಹೊರತುಪಡಿಸಿ ಅಭಿಮಾನಿಗಳಿಗೂ ಸಂತೋಷದ ವಿಷಯವಾಗಿದೆ.
ಕುಟುಂಬದ ಮೂಲಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಸೋನಂ ಪ್ರಸ್ತುತ ಬೆಂಗಳೂರಿನ ನರ್ಸಿಂಗ್ ಹೋಮ್‌ನಲ್ಲಿ ಆರೋಗ್ಯವಾಗಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬುಧವಾರ ಬೆಳಗ್ಗೆ 11:11ಕ್ಕೆ ಸೋನಂ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇನ್ನು ಸುನಿಲ್ ಛಟ್ರಿ ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳಲ್ಲಿ ಈ ಪ್ರವೃತ್ತಿ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಸಕಾರಾತ್ಮಕ ಸುದ್ದಿಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತವೆ. ಆದರೆ, ಸುನಿಲ್ ಮತ್ತು ಸೋನಮ್ ಇಬ್ಬರೂ ಈ ವಿಷಯದ ಬಗ್ಗೆ ಆನ್‌ಲೈನ್‌ನಲ್ಲಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಿರಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.
ಕಳೆದ ಜೂನ್ ತಿಂಗಳಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್ ಕಪ್ ಪಂದ್ಯದ ಸಂದರ್ಭದಲ್ಲಿ, ಸುನಿಲ್ ಛೆಟ್ರಿ ತಾನು ತಂದೆಯಾಗುತ್ತಿರುವುದಾಗಿ ಬಹಿರಂಗಪಡಿಸಿದ್ದರು. ಗೋಲು ಗಳಿಸಿದ ಸಂದರ್ಭದಲ್ಲಿ ತಮ್ಮ ಜೆರ್ಸಿಯ ಒಳಗೆ ಫುಟ್ಬಾಲ್ ಚೆಂಡನ್ನು ಇಟ್ಟು ತಮ್ಮ ಪತ್ನಿ ಗರ್ಭಿಣಿ ಎಂಬುದನ್ನು ವಿಭಿನ್ನ ಶೈಲಿಯಲ್ಲಿ ಹೇಳಿದ್ದರು. ಮೈದಾನದ ವೀಕ್ಷಕರ ಗ್ಯಾಲರಿಯಲ್ಲಿದ್ದ ಸೋನಮ್ ಕಡೆಗೆ ನೋಡುತ್ತಾ ಸಂಭ್ರಮಾಚರಿಸಿದ್ದರು. ಅಲ್ಲದೇ ಸೋನಂ ಕೂಡಾ ಅದಕ್ಕೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ಕುಟುಂಬವು ಮುದ್ದಾದ ಮಗುವನ್ನು ಸ್ವಾಗತಿಸಿದೆ.