ಬಾಕು (ಅಜೆರ್ಬೈಜಾನ್): ವಿಶ್ವದ ನಂಬರ್ ಒನ್ ಆಟಗಾರ ಮ್ಯಾಗ್ನಸ್ ಕಾರ್ಲಸನ್ ಅವರನ್ನ ಕೊನೆವರೆಗೂ ಕಾಡಿ, ಅತ್ಯಂತ ಕಠಿಣ ಹೋರಾಟದಲ್ಲಿ ವಿರೋಚಿತ ಸೋಲು ಅನುಭವಿಸಿದ ಭಾರತೀಯ ಚೆಸ್ಪಟು ಆರ್ ಪ್ರಜ್ಞಾನಂದ ಪಂದ್ಯದ ಬಳಿಕ ಮಾತನಾಡಿದ್ದಾರೆ.
ತನ್ನ ಚೆಸ್ ಆಟದಲ್ಲಿ ತಾವಿನ್ನೂ ಭಾರಿ ಸುಧಾರಣೆ ಮಾಡಿಕೊಳ್ಳಬೇಕಿದೆ. ಕಲಿಯುವುದು ಬಹಳಷ್ಟಿದೆ ಎಂದು ಪಗ್ನಾನಂದ ನಮ್ರತೆಯಿಂದ ಹೇಳಿದ್ದಾನೆ. ಗುರುವಾರ ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆದ ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ಆಯೋಜಿಸಿದ್ದ ವಿಶ್ವಕಪ್‌ನಲ್ಲಿ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರ ವಿರುದ್ಧ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ವಿರೋಚಿತ ಸೋಲು ಕಂಡಿದ್ದರು.
ಫೈನಲ್ ಪಂದ್ಯ ಎರಡು ದಿನಕ್ಕೂ ಹೆಚ್ಚು ಕಾಲ ನಡೆದು, ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿದ್ದರಿಂದ ಅಂತಿಮವಾಗಿ ನಿನ್ನೆ ಟ್ರೈ ಬ್ರೇಕರ್ ಪಂದ್ಯವನ್ನು ನಡೆಸಲಾಯಿತು. ಪ್ರಜ್ಞಾನಂದ ನಿನ್ನೆಯ ಮೊದಲ ಟ್ರೈಬೇಕರ್ನಲ್ಲಿ ಸೋಲು ಕಂಡರು. ಈ ಮೂಲಕ ಅಂತಿಮವಾಗಿ 0.5- 1.5 ಅಂಕಗಳಿಂದ ಚಾಂಪಿಯನ್ ಪಟ್ಟ ಕಾರ್ಲಸನ್ ಅವರಿಗೆ ಹೋಯಿತು. 18 ರ ಪೋರ ಪ್ರಜ್ಞಾನಂದ ರನ್ನರ್ ಅಪ್ಗೆ ತೃಪ್ತಿಪಡಬೇಕಾಯಿತು. ಆದರೆ ವಿಶ್ವದ ಚಸ್ಪಟುಗಳ ಮನಗೆಲ್ಲುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದಾನೆ.
ಪಂದ್ಯದ ಬಳಿಕ ಮಾತನಾಡಿದ ಅವರು, ಇಂದು ನಾನು ನನ್ನದೇ ಹಾದಿಯಲ್ಲಿ ಸಾಗಲು ಸಾಧ್ಯವಾಗಲಿಲ್ಲ. ಕ್ರೀಡೆಯಲ್ಲಿ ಇದು ಸಾಮಾನ್ಯವಾಗಿದೆ. ಮ್ಯಾಗ್ನಸ್ ವಿಶ್ವದ ಅತ್ಯುತ್ತಮ ಆಟಗಾರ, ಅವರೊಂದಿಗೆ ಆಡಬೇಕಾದರೆ ನಾನಿನ್ನೂ ಚೆಸ್ ಬಗ್ಗೆ ಬಹಳಷ್ಟು ಕಲಿಯಬೇಕಿದೆ. ಹಲವು ಸುಧಾರಣೆಗಳನ್ನು ಮಾಡಿಕೊಳ್ಳಬೇಕಿದೆ. ಆ ದಿಸೆಯಲ್ಲಿ ನಾನು ಸಾಗುತ್ತಿದ್ದೇನೆ ಎಂದು ಯುವ ಚೆಸ್ ಆಟಗಾರ ಹೇಳಿದ್ದಾರೆ. ಟೈ-ಬ್ರೇಕರ್ ಆಡುವಾಗ ನಾನು ಮತ್ತು ಮ್ಯಾಗ್ನಸ್ ಇಬ್ಬರೂ ಸುಸ್ತಾಗಿದ್ದೆವು ಎಂದರು.