ನವದೆಹಲಿ: ಭಾರತದ ಅಗ್ರ ಓಟಗಾರರಾದ ಶ್ರೀನಿ ಬುಗತಾ ಹಾಗೂ ಸುಧಾ ಸಿಂಗ್ ಭಾನುವಾರ ನಡೆಯಲಿರುವ 6ನೇ ಆವೃತ್ತಿಯ ಏಜೀಸ್ ಫೆಡರಲ್ ಲೈಫ್ ಇನ್ಶುರೆನ್ಸ್ ನವದೆಹಲಿ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುತ್ತಿದ್ದು, ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಇರುವ ಗುರಿಯನ್ನು ತಲುಪುವ ವಿಶ್ವಾಸದಲ್ಲಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಬ್ಬರು ಅಗ್ರ ಅಥ್ಲೀಟ್‌ಗಳು, ಟೋಕಿಯೋಗೆ ತೆರಳಲು ಬೇಕಿರುವ ಅರ್ಹತೆಯ ಬಗ್ಗೆ ತಮಗೆ ಸಂಪೂರ್ಣ ಅರಿವಿದ್ದು, ಅದಕ್ಕಾಗಿ ತಾವು ಕೈಗೊಂಡಿರುವ ತರಬೇತಿಯ ವಿವರಗಳನ್ನು ಬಹಿರಂಗಪಡಿಸಿದರು.
ಪುಣೆಯಲ್ಲಿರುವ ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಆಂಧ್ರ ಪ್ರದೇಶದ ರೈತ ಕುಟುಂಬದ ಶ್ರೀನಿ ಬುಗತಾ, "ನನ್ನ ಒಲಿಂಪಿಕ್ ಕನಸನ್ನು ನನಸಾಗಿಸಿಕೊಳ್ಳಲು ಹೋರಾಟ ನಡೆಸಲಿದ್ದು, 2 ಗಂಟೆ 11 ನಿಮಿಷ 36 ಸೆಕೆಂಡ್‌ಗಳಲ್ಲಿ ಗುರಿ ತಲುಪಬೇಕು ಎಂದುಕೊಂಡಿದ್ದೇನೆ. ಕೋವಿಡ್ ಕಾರಣಗಳಿಂದಾಗಿ ಕೆಲ ಅವಕಾಶಗಳು ಕೈತಪ್ಪಿದವು. ಆದರೆ ಈ ವರ್ಷ ನನ್ನ ವೈಯಕ್ತಿಕ ಶ್ರೇಷ್ಠ 2 ಗಂಟೆ 18 ನಿಮಿಷ 36 ಸೆಕೆಂಡ್‌ಗಳಾಗಿದ್ದು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಬೇಕಿರುವ ಗುರಿಯನ್ನು ತಲುಪಲಿದ್ದೇನೆ ಎನ್ನುವ ನಂಬಿಕೆ ಇದೆ." ಎಂದರು.
ಏಷ್ಯನ್ ಗೇಮ್ಸ್ ಮಾಜಿ ಚಾಂಪಿಯನ್ ಸುಧಾ ಸಿಂಗ್ ಮಾತನಾಡಿ, 3000 ಮೀ ಸ್ಟೀಪಲ್‌ಚೇಸ್‌ನಲ್ಲಿ ಒಪಿ ಜೈಶಾ ನಿರ್ಮಿಸಿದ್ದ 2 ಗಂಟೆ 30 ನಿಮಿಷಗಳ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಗುರಿ ಹೊಂದಿರುವುದಾಗಿ ಹೇಳಿದರು. ಇದರೊಂದಿಗೆ ಭಾರತೀಯ ತಂಡದಲ್ಲಿ ಸ್ಥಾನ ಗಳಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದರು.