ನವದೆಹಲಿ:ಮುಂಬರುವ ಕಾಮನ್ವೆಲ್ತ್ ಗೇಮ್ಸ್ಗಾಗಿ ನಡೆಸಲಾಗುತ್ತಿರುವ ಡೋಪಿಂಗ್ ಪರೀಕ್ಷೆಯಲ್ಲಿ ಅಗ್ರ ಓಟಗಾರ್ತಿ ಎಸ್.ಧನಲಕ್ಷ್ಮಿ, ರಾಷ್ಟ್ರೀಯ ದಾಖಲೆ ರಚಿಸಿದ ಟ್ರಿಪಲ್ ಜಂಪರ್ ಐಶ್ವರ್ಯಾ ಬಾಬು ನಿಷೇಧಿತ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದ್ದು ಗೇಮ್ಸ್‌ನಿಂದ ಹೊರಬಿದ್ದಿದ್ದಾರೆ.
ಅಥ್ಲೆಟಿಕ್ಸ್ ಇಂಟೆಗ್ರಿಟಿ ಯುನಿಟ್ (ಎಐಯು) ನಡೆಸಿದ ಡೋಪ್ ಪರೀಕ್ಷೆಯಲ್ಲಿ ನಿಷೇಧಿತ ಸ್ಟೀರಾಯ್ಡ್ ಅನ್ನು ಓಟಗಾರ್ತಿ ಪಡೆದಿರುವುದನ್ನು ಪತ್ತೆ ಮಾಡಿದೆ. ಧನಲಕ್ಷ್ಮಿ ಅವರು 100 ಮೀ ಮತ್ತು 4x100 ಮೀ ರಿಲೇ ತಂಡದಲ್ಲಿ ದ್ಯುತಿ ಚಂದ್, ಹಿಮಾ ದಾಸ್ ಮತ್ತು ಶ್ರಬಾನಿ ನಂದಾ ಅವರ ಜೊತೆ ಸ್ಥಾನ ಪಡೆದಿದ್ದರು.
ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಧನಲಕ್ಷ್ಮಿ ಆಯ್ಕೆಯಾಗಿದ್ದರು. ವೀಸಾ ಸಮಸ್ಯೆಗಳಿಂದಾಗಿ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಡೋಪಿಂಗ್ ನಡೆಸಿದ್ದು, ಕಾಮನ್ವೆಲ್ತ್ನಿಂದಲೂ ಹೊರಬಿದ್ದಿದ್ದಾರೆ.
ಜೂನ್ 26 ರಂದು ನಡೆದ ಕೊಸಾನೋವ್ ಸ್ಮಾರಕ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಧನಲಕ್ಷ್ಮಿ 22.89 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿ 200 ಮೀಟರ್ ಓಟದಲ್ಲಿ ಚಿನ್ನ ಜಯಿಸಿದ್ದರು. ಅಲ್ಲದೇ, ವೈಯಕ್ತಿಕ ದಾಖಲೆಯೂ ಸೃಷ್ಟಿಸಿದ್ದರು. ರಾಷ್ಟ್ರೀಯ ದಾಖಲೆಯ ಆಟಗಾರ್ತಿಯರಾದ ಸರಸ್ವತಿ ಸಹಾ (22.82 ಸೆ) ಮತ್ತು ಹಿಮಾ ದಾಸ್ ನಂತರ ಕಡಿಮೆ ಅವಧಿಯಲ್ಲಿ (22.88 ಸೆ.) ಗುರಿ ಮುಟ್ಟಿದ ಮೂರನೇ ಓಟಗಾರ್ತಿ ಎಂಬ ಹೆಗ್ಗಳಿಕೆ ಹೊಂದಿದ್ದರು.
ಐಶ್ವರ್ಯಾ ಕೂಡ ಹೊರಕ್ಕೆ:ಟ್ರಿಪಲ್ ಜಂಪರ್ ಐಶ್ವರ್ಯಾ ಬಾಬು ಅವರ ಡೋಪಿಂಗ್ ಮಾದರಿ ಕೂಡ ಪಾಸಿಟಿವ್ ಬಂದಿದ್ದು, ಕಾಮನ್ವೆಲ್ತ್ನಿಂದ ಹಿಂದೆ ಸರಿಯಬೇಕಾಗಿದೆ. ಚೆನ್ನೈನಲ್ಲಿ ನಡೆದ ಅಂತರರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 14.14 ಮೀಟರ್ ದೂರ ಕ್ರಮಿಸಿ ಟ್ರಿಪಲ್ ಜಂಪ್ ರಾಷ್ಟ್ರೀಯ ದಾಖಲೆಯನ್ನು ಮುರಿದು, ಕಾಮನ್ವೆಲ್ತ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.
ಇದನ್ನೂ ಓದಿ:ಶಿಖರ್ ಧವನ್ 'ಹಾಯ್' ರೀಲ್ಸ್ನಲ್ಲಿ ಕೋಚ್ ದ್ರಾವಿಡ್: ವಿಡಿಯೋ ನೋಡಿ