ಪಾಣಿಪತ್:ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ತಂದುಕೊಟ್ಟಿರುವ ನೀರಜ್ ಚೋಪ್ರಾ, ಪಾಕಿಸ್ತಾನದ ಜಾವೆಲಿನ್ ಥ್ರೋವರ್ ಅರ್ಷದ್ ನದೀಮ್ ತಮ್ಮ ಜಾವಲಿನ್ಅನ್ನು ಟ್ಯಾಂಪರಿಂಗ್ ಮಾಡಲು ಯತ್ನಿಸಿದ್ದರು ಎಂಬ ಊಹಾಪೋಹಗಳನ್ನು ತಿರಸ್ಕರಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನ ಜಾವೆಲಿನ್ ಫೈನಲ್ ವೇಳೆ ಚೋಪ್ರಾ ಮೊದಲ ಅವಕಾಶವನ್ನು ಆತುರವಾಗಿ ಎಸೆದಿದ್ದರು. ಇದಕ್ಕೆ ಸಂದರ್ಶವೊಂದರಲ್ಲಿ ಪ್ರತಿಕ್ರಿಯಿಸಿದ ಅವರು ನನ್ನ ಮೊದಲ ಎಸೆತದ ಸಂದರ್ಭದಲ್ಲಿ ನನ್ನ ಜಾವೆಲಿನ್ ಕಾಣಿಸುತ್ತಿರಲಿಲ್ಲ, ಅದು ತಕ್ಷಣ ಪಾಕಿಸ್ತಾನ ಅರ್ಷದ್ ನದೀಮ್ ಅವರ ಕೈಯಲ್ಲಿ ಕಾಣಿಸಿತು. ಆಗಲೇ ತಡವಾಗಿದ್ದರಿಂದ ಅದನ್ನು ಅವರಿಂದ ಕೇಳಿ ಪಡೆದು ಆತುರವಾಗಿ ನನ್ನ ಮೊದಲ ಪ್ರಯತ್ನವನ್ನು ಮುಗಿಸಿದ್ದೆ ಎಂದು ಅವರು ತಿಳಿಸಿದ್ದರು.
ಈ ಹೇಳಿಕೆಯನ್ನು ಬಳಸಿಕೊಂಡ ಕೆಲವು ನೆಟ್ಟಿಗರು ಪಾಕಿಸ್ತಾನದ ಅರ್ಷದ್, ನೀರಜ್ ಅವರ ಜಾವೆಲಿನ್ ಅನ್ನು ಟ್ಯಾಂಪರಿಂಗ್ ಮಾಡಲು ಪ್ರಯತ್ನಿಸಿದ್ದರು. ಆದರೆ, ನೀರಜ್ಗೆ ಕೈಯಲ್ಲಿ ಸಿಕ್ಕಿಬಿದ್ದರು ಎಂದೆಲ್ಲಾ ಕಮೆಂಟ್ ಮಾಡಿದ್ದರು. ಇನ್ನೂ ಕೆಲವರು ಫೈನಲ್ಸ್ ವೇಳೆ ಚೋಪ್ರಾ ನದೀಮ್ರಿಂದ ಜಾವಲಿನ್ ಪಡೆಯುತ್ತಿರುವ ವಿಡಿಯೋವನ್ನು ಬಳಸಿ ನದೀಮ್ ಅವರನ್ನು ಟೀಕಿಸಿದ್ದರು.
ಆದರೆ, ಇದರ ಬಗ್ಗೆ ಸ್ಪಷ್ಟನೆ ನೀಡಿರುವ ನೀರಜ್, "ನಿಮ್ಮ ಹಿತಾಸಕ್ತಿಗಳು ಮತ್ತು ಪ್ರಚಾರವನ್ನು ಹೆಚ್ಚಿಸಿಕೊಳ್ಳಲು ದಯವಿಟ್ಟು ನನ್ನನ್ನು ಮತ್ತು ನನ್ನ ಕಮೆಂಟ್‌ಗಳನ್ನು ಮಾಧ್ಯಮವಾಗಿ ಬಳಸಬೇಡಿ ಎಂದು ನಾನು ಎಲ್ಲರಿಗೂ ವಿನಂತಿಸುತ್ತೇನೆ. ಕ್ರೀಡೆಗಳು ನಮಗೆ ಒಗ್ಗಟ್ಟು ಮತ್ತು ಒಂದಾಗುವಿಕೆಯನ್ನು ಕಲಿಸುತ್ತದೆ. ನನ್ನ ಇತ್ತೀಚಿನ ಕಮೆಂಟ್ ಬಗ್ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಬಂದಿರುವ ಪ್ರತಿಕ್ರಿಯೆಗಳು ನನಗೆ ನಿರಾಸೆ ತರಿಸಿದೆ " ಎಂದು ಚೋಪ್ರಾ ವಿಡಿಯೋ ಜೊತೆಗೆ ಟ್ವೀಟ್ ಮಾಡಿದ್ದಾರೆ.
ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಜಾವೆಲಿನ್ ಪಟು
ಯಾವುದೇ ಎಸೆತಗಾರ ಸ್ಪರ್ಧೆಯಲ್ಲಿ ಯಾರದೇ ಜಾವೆಲಿನ್ ಅನ್ನಾದರೂ ಎಸೆಯಬಹುದು, ಇದಕ್ಕೆ ಯಾವುದೇ ನಿಯಮಗಳಿಲ್ಲ ಎಂದು 23 ವರ್ಷದ ನೀರಜ್ ನದೀಮ್ ತಮ್ಮ ಜಾವೆಲಿನ್ ಕದಿಯಲು ಅಥವಾ ಇನ್ಯಾವುದೇ ದುಷ್ಕೃತ್ಯ ಎಸಗಲು ಪ್ರಯತ್ನಿಸಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.