ನವದೆಹಲಿ:ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ಫಿಡೆ(FIDE) ವಿಶ್ವಕಪ್ 2023ರಲ್ಲಿ ರನ್ನರ್ ಅಪ್ ಆದ 18 ವರ್ಷದ ಚೆಸ್ ಚತುರ ಪ್ರಜ್ಞಾನಂದ ಅವರಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಇಂದು (ಶುಕ್ರವಾರ) ಭೇಟಿ ಮಾಡಿ ಅಭಿನಂದಿಸಿದ್ದಾರೆ. ನಿನ್ನೆ (ಗುರುವಾರ) ಪ್ರಧಾನ ಮಂತ್ರಿ ನರೇಂದ್ರ ಮೋದಿ ಗ್ರ್ಯಾಂಡ್ಮಾಸ್ಟರ್ ಆರ್ ಪ್ರಜ್ಞಾನಂದ ಅವರನ್ನು ಭೇಟಿ ಮಾಡಿದ್ದರು.
ಚೆಸ್ ವಿಶ್ವಕಪ್ನಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ ಜೊತೆಗೆ ಪಂದ್ಯವಾಡಿ ಬೆಳ್ಳಿಗೆದ್ದ, ಪ್ರಜ್ಞಾನಂದಾ ಅವರನ್ನು ಸಚಿವರು ಅಭಿನಂದಿಸಿದರು. ಈ ವೇಳೆ, ಗ್ರ್ಯಾಂಡ್ಮಾಸ್ಟರ್ ಆರ್ ಪ್ರಜ್ಞಾನಂದ ಅವರ ತಂದೆ ರಮೇಶ್ ಬಾಬು, ತಾಯಿ ನಾಗಲಕ್ಷ್ಮಿ ಸಹ ಉಪಸ್ಥಿತರಿದ್ದರು.
ಪ್ರಜ್ಞಾನಂದ ಅವರು ತಮಗೆ ಸಿಕ್ಕಿರುವ ಬೆಂಬಲಕ್ಕೆ ಸಂತಸ ವ್ಯಕ್ತಪಡಿಸಿದ್ದು, ಇದು ಇನ್ನಷ್ಟು ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದರು. "ನಾವು ಈ ಬೆಂಬಲವನ್ನು ಪಡೆಯುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ಇದು ಇನ್ನಷ್ಟೂ ಕಠಿಣವಾಗಿ ಕೆಲಸ ಮಾಡಲು, ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಮತ್ತು ದೇಶಕ್ಕೆ ಪ್ರಶಸ್ತಿಗಳನ್ನು ತರಲು ನಮ್ಮನ್ನು ಪ್ರೇರೇಪಿಸುತ್ತಿದೆ" ಎಂದಿದ್ದಾರೆ.
ಸನ್ಮಾನದ ಸಂದರ್ಭದಲ್ಲಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಪ್ರಜ್ಞಾನಂದ ಅವರನ್ನು ಅಭಿನಂದಿಸಿದರು. "ನಾನು ಅವರನ್ನು ಅಭಿನಂದಿಸುತ್ತೇನೆ. ಅವರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. 18 ನೇ ವಯಸ್ಸಿನಲ್ಲಿ ಅವರು ಇತರರಿಗೆ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ್ದಾರೆ. ಅನೇಕ ಯುವಕರು ಚೆಸ್ ಆಡಲು ಅವರಿಂದ ಸ್ಫೂರ್ತಿ ಪಡೆದುಕೊಂಡಿದ್ದಾರೆ. ಚೆಸ್ ಭಾರತದಲ್ಲಿ ಹುಟ್ಟಿಕೊಂಡಿತು, ಆದರೆ ಚೆಸ್ ಒಲಿಂಪಿಯಾಡ್ ಅನ್ನು ಆಯೋಜಿಸಲು ನೂರಾರು ವರ್ಷಗಳನ್ನು ತೆಗೆದುಕೊಂಡಿತು. ದೇಶ ಮತ್ತು ಅದನ್ನು ಯಶಸ್ವಿಯಾಗಿ ಸಂಘಟಿಸಲಾಯಿತು" ಎಂದು ಅನುರಾಗ್ ಠಾಕೂರ್ ಹೇಳಿದರು.
ನಿನ್ನೆ ಪ್ರಜ್ಞಾನಂದ ಅವರ ಭೇಟಿಯ ಬಗ್ಗೆ ಮೋದಿ ತಮ್ಮ ಎಕ್ಸ್ ಖಾತೆ (ಹಿಂದಿನ ಟ್ವಿಟರ್)ಯಲ್ಲಿ ಹಂಚಿಕೊಂಡಿದ್ದಾರೆ. "ಇಂದು ನನ್ನ ನಿವಾಸಕ್ಕೆ ವಿಶೇಷ ಅತಿಥಿಗಳು ಆಗಮಿಸಿದ್ದರು. ಪ್ರಜ್ಞಾನಂದ ಮತ್ತು ಅವರ ಕುಟುಂಬದವರನ್ನು ಖುದ್ದಾಗಿ ಭೇಟಿ ಮಾಡಿರುವುದು ಖುಷಿ ತಂದಿದೆ. ನಿಮ್ಮ ಉತ್ಸಾಹ ಮತ್ತು ಪರಿಶ್ರಮವನ್ನು ನಿರೂಪಿಸಿದ್ದೀರಿ. ಭಾರತದ ಯುವಕರು ಯಾವುದೇ ಕ್ಷೇತ್ರದಲ್ಲಾದರೂ ಹೇಗೆ ಜಯಿಸಬಹುದು ಎಂಬುದಕ್ಕೆ ನೀವು ಉದಾಹರಣೆಯಾಗಿದ್ದೀರಿ. ನಿಮ್ಮ ಬಗ್ಗೆ ನನಗೆ ಹೆಮ್ಮೆಯಿದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ