ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರವು ಪ್ರಧಾನ ಮಂತ್ರಿ ಕೋವಿಡ್ ಪರಿಹಾರ ನಿಧಿಗೆ 76 ಲಕ್ಷ ರೂಪಾಯಿ ದೇಣಿಗೆ ನೀಡಿದೆ. ಕ್ರೀಡಾ ಪ್ರಾಧಿಕಾರದ ಸಿಬ್ಬಂದಿಯು ತಮ್ಮ ವೇತನದ ಪಾಲು ನೀಡುವ ಮೂಲಕ ಈ ಮೊತ್ತ ಸಂಗ್ರಹಿಸಿದ್ದಾರೆ.
76 ಲಕ್ಷ ರೂಪಾಯಿ ಡೆಬಿಟ್ ಅಗಿರುವುದನ್ನು ತೋರಿಸುವ ಬ್ಯಾಂಕ್ ಪಾಸ್ಬುಕ್ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳುವ ಮೂಲಕ ಕ್ರೀಡಾ ಸಚಿವ ಕಿರೆನ್ ರಿಜಿಜು ದೇಣಿಗೆ ಸಂದಾಯವಾಗಿರುವುದನ್ನು ಖಚಿತಪಡಿಸಿದ್ದಾರೆ.
"ಭಾರತೀಯ ಕ್ರೀಡಾ ಪ್ರಾಧಿಕಾರದ ಗ್ರೂಪ್ ಎ ನೌಕರರು ತಮ್ಮ 3 ದಿನಗಳ ವೇತನ, ಗ್ರೂಪ್ ಬಿ ನೌಕರರು 2 ದಿನಗಳ ವೇತನ ಹಾಗೂ ಇತರ ಎಲ್ಲ ಸಿಬ್ಬಂದಿ 1 ದಿನದ ವೇತನವನ್ನು ಪ್ರಧಾನ ಮಂತ್ರಿಗಳ PMCARES ನಿಧಿಗೆ ನೀಡಿದ್ದು ಹೆಮ್ಮೆಯ ವಿಷಯವಾಗಿದೆ." ಎಂದು ರಿಜಿಜು ಟ್ವಿಟರ್ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ 'ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿ (ಪಿಎಂ-ಕೇರ್ಸ್ ನಿಧಿ)' ಘೋಷಣೆ ಮಾಡಿ, ದೇಶದ ನಾಗರಿಕರೆಲ್ಲೂ ಕೋವಿಡ್ ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದ್ದರು.
ಪ್ರಧಾನಿಗಳ ಕರೆಗೆ ಓಗೊಟ್ಟು ಈಗಾಗಲೇ ಹಲವಾರು ಕ್ರೀಡಾಪಟುಗಳು ಈ ನಿಧಿಗೆ ದೇಣಿಗೆ ನೀಡಿದ್ದಾರೆ. ಕ್ರಿಕೆಟರ್ ಸುರೇಶ ರೈನಾ ಪಿಎಂ-ಕೇರ್ಸ್ ನಿಧಿಗೆ 31 ಲಕ್ಷ ರೂ. ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿಗಳ ವಿಪತ್ತು ನಿಧಿಗೆ 21 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಹಾಗೆಯೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಹ ಪಿಎಂ-ಕೇರ್ಸ್ ನಿಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ವಿಪತ್ತು ನಿಧಿಗೆ ತಲಾ 25 ಲಕ್ಷ ರೂ. ಸಂದಾಯ ಮಾಡಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕ್ರೀಡಾಪಟುಗಳಾದ ಹಿಮಾ ದಾಸ್, ಪಿವಿ ಸಿಂಧು, ಬಜರಂಗ್ ಪೂನಿಯಾ ಸಹ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.