ಕಠ್ಮಂಡು:ಹದಿಮೂರನೇ ದಕ್ಷಿಣ ಏಷ್ಯನ್ ಗೇಮ್ಸ್ನಲ್ಲಿ ಭಾರತ ಪಾರಮ್ಯ ಮೆರೆದಿದ್ದು, 138 ಚಿನ್ನ, 83 ಬೆಳ್ಳಿ ಹಾಗೂ 43 ಕಂಚಿನ ಪದಕದೊಂದಿಗೆ ಒಟ್ಟಾರೆ 264 ಪದಕಗಳಿಂದ ಅಗ್ರಸ್ಥಾನದಲ್ಲಿದೆ.
ಭಾರತ ಮುಖ್ಯವಾಗಿ ಈಜು ಹಾಗೂ ಕುಸ್ತಿ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ. ಈಜು ವಿಭಾಗದಲ್ಲಿ ಭಾರತ 7 ಚಿನ್ನ, 2 ಬೆಳ್ಳಿ ಹಾಗೂ 2 ಕಂಚು ಜಯಿಸಿದರೆ, ಕುಸ್ತಿ ವಿಭಾಗದಲ್ಲಿ 4 ಚಿನ್ನ ತನ್ನದಾಗಿಸಿಕೊಂಡಿದೆ.
ಟೇಬಲ್ ಟೆನಿಸ್ನಲ್ಲಿ ಭಾರತ ಕ್ಲೀನ್ಸ್ವೀಪ್ ಮಾಡಿದ್ದು, 7 ಚಿನ್ನ ಐದು ಬೆಳ್ಳಿ ಪದಕ ಗೆದ್ದಿದೆ. ಇದೇ ವಿಭಾಗದಲ್ಲಿ ಮಹಿಳೆಯ ಹಾಗೂ ಪುರುಷರ ಸಿಂಗಲ್ಸ್ನಲ್ಲಿ ಸ್ವರ್ಣ ಜಯಿಸಿದೆ.
ಆತಿಥೇಯ ನೇಪಾಳ 49 ಚಿನ್ನ, 48 ಬೆಳ್ಳಿ ಹಾಗೂ 78 ಕಂಚು(175) ಪದಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. 36 ಚಿನ್ನ ಗೆದ್ದಿರುವ ಶ್ರೀಲಂಕಾ ಮೂರನೇ ಸ್ಥಾನ ಪಡೆದುಕೊಂಡಿದೆ.
ಡಿ.1ರಂದು ನೇಪಾಳದ ಕಠ್ಮಂಡುವಿನಲ್ಲಿ ಆರಂಭವಾಗಿರುವ 13ನೇ ಆವೃತ್ತಿಯ ದಕ್ಷಿಣ ಏಷ್ಯನ್ ಗೇಮ್ಸ್ ಇಂದು ಮುಕ್ತಾಯವಾಗಲಿದೆ. ಈ ಆವೃತ್ತಿಯಲ್ಲಿ ಭಾರತ,ನೇಪಾಳ,ಶ್ರೀಲಂಕಾ,ಭೂತಾನ್,ಬಾಂಗ್ಲಾದೇಶ,ಪಾಕಿಸ್ತಾನ ಹಾಗೂ ಮಾಲ್ಡೀವ್ಸ್ ಭಾಗವಹಿಸಿದೆ. 27 ವಿವಿಧ ಕ್ರೀಡೆಯಲ್ಲಿ 2,715 ಕ್ರೀಡಾಳುಗಳು ಭಾಗವಹಿಸಿದ್ದಾರೆ.