ನವದೆಹಲಿ:ಏಷ್ಯನ್ ಯೂತ್ ಚಾಂಪಿಯನ್ಶಿಪ್ನಲ್ಲಿ ಭಾರತದ ಯುವ ಬಾಕ್ಸರ್‌ಗಳು ಪ್ರಾಬಲ್ಯ ಮೆರೆದಿದ್ದಾರೆ. 15 ಮಂದಿ ಫೈನಲ್ನಲ್ಲಿ ಸೆಣಸಿದ್ದು, ಇದರಲ್ಲಿ 6 ಬಾಕ್ಸರ್‌ಗಳು ಚಿನ್ನದ ಪದಕ ಪಡೆದರೆ, 9 ಮಂದಿ ಬೆಳ್ಳಿ ಪದಕ ಪಡೆದಿದ್ದಾರೆ. ಸೆಮಿಫೈನಲ್‌ನಲ್ಲಿ ಸೋಲು ಕಂಡಿರುವ 5 ಮಂದಿ ಕಂಚಿನ ಪದಕಕ್ಕೆ ಕೊರೊಳೊಡ್ಡಿದ್ದಾರೆ.
ಪುರುಷರ ವಿಭಾಗದಲ್ಲಿ ಬಿಶ್ವಾಮಿತ್ರ ಚೋಂಗ್ಥಮ್ (51ಕೆಜಿ ವಿಭಾಗ), ವಿಶಾಲ್ (80ಕೆಜಿ ವಿಭಾಗ), ಮಹಿಳೆಯರ ವಿಭಾಗದಲ್ಲಿ ಪ್ರೀತಿ ದಹಿಯಾ(60ಕೆಜಿ), ಸ್ನೇಹ ಕುಮಾರಿ(66 ಕೆಜಿ), ಖುಷಿ(75ಕೆಜಿ) ಮತ್ತು ನೇಹಾ (54ಕೆಜಿ) ವಿಭಾಗದಲ್ಲಿ ಚಿನ್ನದ ಪದಕ ಪಡೆದರು.
ಕಡಿಮೆ ಸ್ಪರ್ಧಿಗಳಿದ್ದರಿಂದ 10 ಯುವತಿಯರು ಸುಲಭವಾಗಿ ಫೈನಲ್ ಪ್ರವೇಶಿಸಿದ್ದರು. ಇದರಲ್ಲಿ ನಾಲ್ವರು ಚಿನ್ನ ಗೆದ್ದರೆ 6 ಮಂದಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.
ವಿಶ್ವನಾಥ ಸುರೇಶ್ (48ಕೆಜಿ), ವಂಶಜ್ (63.5ಕೆಜಿ ) ಮತ್ತು ಜಯದೀಪ್ ರಾವತ್ (71ಕೆಜಿ ) ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಪ್ರೀತಿ(57ಕೆಜಿ) ಖುಷಿ(63ಕೆಜಿ), ತನಿಶಾ ಸಂಧು (81ಕೆಜಿ) ನಿವೇದಿತಾ (48ಕೆಜಿ) ತಮನ್ನಾ(50ಕೆಜಿ) ಮತ್ತು ಸಿಮ್ರಾನ್(52ಕೆಜಿ) ಬೆಳ್ಳಿ ಗೆದ್ದರು. ಓರ್ವ ಮಹಿಳೆ ಸೇರಿದಂತೆ ಐವರು ಭಾರತೀಯ ಯುವ ಬಾಕ್ಸರ್‌ಗಳು ಸೆಮಿಫೈನಲ್‌ನಲ್ಲಿ ಸೋತು, ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಪುರುಷರಲ್ಲಿ ದಕ್ಷ್ (67 ಕೆಜಿ ), ದೀಪಕ್ (75 ಕೆಜಿ ), ಅಭಿಮನ್ಯು (92 ಕೆಜಿ) ಮತ್ತು ಅಮಾನ್ ಸಿಂಗ್ ಬಿಶ್ತ್ (92+ಕೆಜಿ) ಕಂಚಿನ ಪದಕಗಳನ್ನು ಪಡೆದರೆ, ಲಶು ಯಾದವ್ (70 ಕೆಜಿ ವಿಭಾಗ) ಮಹಿಳಾ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಈ ಹಿಂದೆ ಮಂಗೋಲಿಯಾದ ಉಲಾನ್‌ಬಾತಾರ್‌ನಲ್ಲಿ ನಡೆದ ಏಷ್ಯನ್ ಯೂತ್ ಚಾಂಪಿಯನ್‌ಶಿಪ್‌ನ ಟೂರ್ನಿ ನಡೆದಿತ್ತು. ಈ ಟೂರ್ನಿಯಲ್ಲಿ ಭಾರತವು ಐದು ಚಿನ್ನ ಸೇರಿದಂತೆ 12 ಪದಕಗಳನ್ನು ಪಡೆದುಕೊಂಡಿತ್ತು.
ಇನ್ನು ಜೂನಿಯರ್ ವಿಭಾಗದಲ್ಲಿ ಭಾರತ 19 ಪದಕ ಗೆದ್ದುಕೊಂಡಿತ್ತು. ಇದರಲ್ಲಿ 8 ಚಿನ್ನ, 5 ಬೆಳ್ಳಿ ಮತ್ತು 6 ಕಂಚು ಸೇರಿದ್ದವು. ಇದೇ ಮೊದಲ ಬಾರಿಗೆ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಜೂನಿಯರ್ ಮತ್ತು ಯೂತ್ ಬಾಕ್ಸರ್ಗಳಿಗೆ ಒಂದೇ ಬಾರಿಗೆ ಟೂರ್ನಮೆಂಟ್ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಯೂತ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆಲ್ಲುವ ಸ್ಪರ್ಧಿ 6000 ಅಮೆರಿಕನ್ ಡಾಲರ್, ಬೆಳ್ಳಿ ಪದಕ ಗೆದ್ದವರಿಗೆ 3000 ಮತ್ತು ಕಂಚು ಗೆದ್ದವರಿಗೆ 1,500 ಡಾಲರ್ ಬಹುಮಾನ ನೀಡಲಾಗುತ್ತದೆ. ಜೂನಿಯರ್ ಚಾಂಪಿಯನ್ ವಿಭಾಗದಲ್ಲಿ ಚಿನ್ನಕ್ಕೆ 4000, ಬೆಳ್ಳಿಗೆ 2000 ಮತ್ತು ಕಂಚಿಗೆ 1000 ಡಾಲರ್ ಬಹುಮಾನ ನೀಡಲಾಗುತ್ತದೆ.
ಇದನ್ನು ಓದಿ: ಏಷ್ಯನ್ ಜೂನಿಯರ್ ಬಾಕ್ಸಿಂಗ್ನಲ್ಲಿ ಭಾರತಕ್ಕೆ 8 ಚಿನ್ನದ ಪದಕ