ಹೈದರಾಬಾದ್:ಸತತ ವೈಫಲ್ಯ ಕಾಣುತ್ತಿರುವ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬ್ಯಾಡ್ಮಿಂಟನ್ ದಿಗ್ಗಜ ಕರ್ನಾಟಕದ ಪ್ರಕಾಶ್ ಪಡುಕೋಣೆ ಅವರ ಮೊರೆ ಹೋಗಿದ್ದಾರೆ. ಪ್ರಕಾಶ್ ಪಡುಕೋಣೆ ಅವರು ಈಗ ಸಿಂಧು ಮೆಂಟರ್ ಆಗಿದ್ದು, ಬೆಂಗಳೂರಿನ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಪ್ಯಾರೀಸ್ ಕ್ರೀಡಾಕೂಟದ ಮೇಲೆ ಕಣ್ಣಿಟ್ಟಿರುವ ಷಟ್ಲರ್ ಹೈದರಾಬಾದ್ನಿಂದ ಬೆಂಗಳೂರಿಗೆ ತಮ್ಮ ನೆಲೆಯನ್ನು ಸ್ಥಳಾಂತರಿಸಿದ್ದಾರೆ.
ಕಳೆದ ಏಷ್ಯನ್ ಗೇಮ್ಸ್ಗೂ ಮೊದಲು ಕೆಲ ದಿನಗಳ ಕಾಲ ಪಡುಕೋಣೆ ಅವರ ಗರಡಿಯಲ್ಲಿ ಅಭ್ಯಾಸ ನಡೆಸಿದ್ದ ಸಿಂಧು, ಇದೀಗ ಪೂರ್ಣಪ್ರಮಾಣದಲ್ಲಿ ಅವರಿಂದ ತರಬೇತಿಗೆ ಮುಂದಾಗಿದ್ದಾರೆ. ಈ ವಿಷಯವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಿಂಧು ಖಚಿತಪಡಿಸಿದ್ದಾರೆ.
ಸಿಂಧು ಹೇಳಿದ್ದೇನು?:ಪ್ರಕಾಶ್ ಪಡುಕೋಣೆ ಅವರ ಬಳಿ ನಾನು ಮಾರ್ಗದರ್ಶನ ಪಡೆಯುತ್ತಿದ್ದೇನೆ. ಆಗಸ್ಟ್ ಅಂತ್ಯದಿಂದ ಅವರ ಅಕಾಡೆಮಿಯಲ್ಲಿ ತರಬೇತಿ ಆರಂಭಿಸಿದ್ದೇನೆ. ಅವರು ಮಾರ್ಗದರ್ಶಕರು, ಗುರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಜವಾದ ಸ್ನೇಹಿತರಾಗಿದ್ದಾರೆ. ನನ್ನಲ್ಲಿರುವ ಆಟವನ್ನು ಹೊರತರುವ ಮ್ಯಾಜಿಕ್ ಅನ್ನು ಅವರು ಮಾಡಲಿದ್ದಾರೆ ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.
ಜಪಾನ್‌ನಲ್ಲಿದ್ದಾಗ ನಾನು ಅವರಿಗೆ ಕರೆ ಮಾಡಿ ತರಬೇತಿ ನೀಡಲು ಕೋರಿದಾಗ ಒಪ್ಪಿಕೊಂಡಿದ್ದಕ್ಕೆ ಕೃತಜ್ಞಳಾಗಿದ್ದೇನೆ. ಇದನ್ನು ನಾನು ಅಸಾಧಾರಣ ಸಂಪರ್ಕ ಎಂದು ಭಾವಿಸುವೆ. ಆತ್ಮೀಯ ಸರ್, ನಾನು ಪುಳಕಿತಳಾಗಿದ್ದೇನೆ. ನಿಮ್ಮೊಂದಿಗೆ ತರಬೇತಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ನೇತೃತ್ವದಲ್ಲಿ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಸಿಂಧು ಬರೆದಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊರಿಯಾದ ಕೋಚ್ ಪಾರ್ಕ್ ಟೇ ಸಾಂಗ್ ಅವರಿಂದ ಸಿಂಧು ಕೆಲ ದಿನಗಳ ಹಿಂದೆ ಬೇರ್ಪಟ್ಟಿದ್ದರು. ಬಳಿಕ ಮಲೇಷ್ಯಾದ ಮಾಜಿ ಆಲ್ ಇಂಗ್ಲೆಂಡ್ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಮುಹಮ್ಮದ್ ಹಫೀಜ್ ಹಾಶಿಮ್ ಅವರನ್ನು ತರಬೇತುದಾರರಾಗಿ ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ಎಸ್‌ಎಐ ತರಬೇತುದಾರ ವಿಧಿ ಚೌಧರಿ ಅವರ ಬಳಿ ಸ್ವಲ್ಪ ದಿನಗಳ ಕಾಲ ಅಭ್ಯಾಸ ನಡೆಸಿದ್ದರು.
ಪ್ರಶಸ್ತಿ, ಗಾಯದ ಸಮಸ್ಯೆ:ಎರಡು ಬಾರಿಯ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸಿಂಧು, ಈ ವರ್ಷ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಅಲ್ಲದೇ ಗಾಯದಿಂದಾಗಿ ಅವರು ಸತತವಾಗಿ ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಅಕ್ಟೋಬರ್ನಲ್ಲಿ ನಡೆದ ಫ್ರೆಂಚ್ ಓಪನ್‌ನಲ್ಲಿ ಥಾಯ್ಲೆಂಡ್‌ನ ಸುಪಾನಿಡಾ ಕಟೆಥೋಂಗ್ ವಿರುದ್ಧದ ಎರಡನೇ ಸುತ್ತಿನ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಪ್ರಶಸ್ತಿ ಬರ ಕಾರಣ ಟಾಪ್ 3 ರಲ್ಲಿದ್ದ ಸಿಂಧು 10 ಕ್ಕೆ ಕುಸಿದಿದ್ದಾದ್ದಾರೆ
ಇದನ್ನೂ ಓದಿ:ಕೊಹ್ಲಿ ಭೇಟಿಯಾಗಲು ಹೋಗಿದ್ದೆ: ಮೈದಾನಕ್ಕೆ ನುಗ್ಗಿದ ಪ್ಯಾಲೆಸ್ಟೈನ್ ಬೆಂಬಲಿಗ ಯಾರು ಗೊತ್ತಾ?