ಸಂಚಿಯಾನ್: ಭಾರತದ ಅಗ್ರ ಶಟ್ಲರ್ಗಳಾದ ಪಿ.ವಿ.ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಕೊರಿಯನ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಸಿಂಗಲ್ಸ್ ವಿಭಾಗದಲ್ಲಿ ಜಯ ಸಾಧಿಸಿ 2ನೇ ಸುತ್ತು ಪ್ರವೇಶಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ 2 ಒಲಿಂಪಿಕ್ ಪದಕಗಳ ವಿಜೇತೆ ಪಿ.ವಿ.ಸಿಂಧು ಅಮೆರಿಕದ ಲಾರೆನ್ ಲ್ಯಾಮ್ ವಿರುದ್ಧ 21-15, 21-14ರಲ್ಲಿ ವಿಜಯಿಯಾದರು. ಇನ್ನೊಂದು ಪಂದ್ಯದಲ್ಲಿ ಶ್ರೀಕಾಂತ್ ಮಲೇಷ್ಯಾದ ವಿಶ್ವದ 35ನೇ ಶ್ರೇಯಾಂಕಿತ ಡರೇನ್ ಲೀವ್ ವಿರುದ್ಧ 22-20, 21-11ರ ಅಂತರದಲ್ಲಿ ಗೆಲುವು ದಾಖಲಿಸಿದರು.
ಟೂರ್ನಿಯಲ್ಲಿ 3ನೇ ಶ್ರೇಯಾಂಕ ಪಡೆದಿರುವ ಸಿಂಧು ಮುಂದಿನ ಸುತ್ತಿನಲ್ಲಿ ಜಪಾನ್ನ ಆಯ ಒಹೋರಿ ವಿರುದ್ಧ ಸೆಣಸಾಡಲಿದ್ದಾರೆ. ಸಿಂಧು ಇತ್ತೀಚೆಗೆ ನಡೆದಿದ್ದ ಸ್ವಿಸ್ ಓಪನ್ ಟೈಟಲ್ ಜಯಿಸಿದ್ದರು. ಇದೀಗ ಮತ್ತೊಂದು ಪ್ರಶಸ್ತಿ ಗೆಲ್ಲುವತ್ತ ಮುನ್ನುಗ್ಗುತ್ತಿದ್ದಾರೆ. ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ಶ್ರೀಕಾಂತ್ 2ನೇ ಸುತ್ತಿನ ಪಂದ್ಯದಲ್ಲಿ ಇಸ್ರೇಲ್ನ ಮಿಶಾ ಜಿಲ್ಬೆರ್ಮನ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.