ಸಿಂಗಾಪುರ: ಭಾರತದ ತಾರಾ ಶಟ್ಲರ್ ಪಿವಿ ಸಿಂಧು ಇಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್ನ ಫೈನಲ್ ತಲುಪಿದ್ದಾರೆ. ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ಆಟಗಾರ್ತಿಯನ್ನು ಸೋಲಿಸಿ ಅಂತಿಮಘಟ್ಟಕ್ಕೆ ಲಗ್ಗೆ ಇಟ್ಟರು.
ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಸಿಂಧು ಜಪಾನ್ನ ಸೈನಾ ಕವಾಕಮಿ ವಿರುದ್ಧ 21-15, 21-7 ರ ಅಂತರದ ನೇರ ಸೆಟ್ಗಳಿಂದ ಬಗ್ಗುಬಡಿದರು. ಭಾರತದ ಆಟಗಾರ್ತಿಯ ಪರಾಕ್ರಮದ ಮುಂದೆ ಜಪಾನ್ ಆಟಗಾರ್ತಿ ನೆಲಕಚ್ಚಿದರು. ಕೇವಲ 32 ನಿಮಿಷದಲ್ಲಿ ಆಟ ಮುಗಿಸಿದ ಸಿಂಧು ಪ್ರಶಸ್ತಿ ಗೆಲುವಿನ ಹಂತಕ್ಕೆ ದಾಂಗುಡಿ ಇಟ್ಟರು.
ಪಂದ್ಯದಲ್ಲಿ ಫೂರ್ಣ ಪ್ರಾಬಲ್ಯ ಸಾಧಿಸಿದ ಭಾರತದ ಆಟಗಾರ್ತಿ ಯಾವುದೇ ಹಂತದಲ್ಲೂ ಜಪಾನ್ನ ಕವಾಕಮಿಯು ಪುಟಿದೇಳಲು ಅನುವು ಮಾಡಿಕೊಡಲಿಲ್ಲ. ಕೋರ್ಟ್ ತುಂಬೆಲ್ಲಾ ಸ್ಕ್ವಾಷ್ಗಳನ್ನು ಸಿಡಿಸುವ ಮೂಲಕ ಕವಾಕಮಿ ದಂಗಾಗುವಂತೆ ಮಾಡಿದರು.
ಸಿಂಧು ತೋಳ್ಬಲದಿಂದ ಸಿಡಿದು ಬರುತ್ತಿದ್ದ ಸ್ಕ್ವಾಷ್ಗಳು ಜಪಾನ್ ಆಟಗಾರ್ತಿಯು ಹಲವಾರು ತಪ್ಪುಗಳನ್ನು ಎಸಗುವಂತೆ ಮಾಡಿತು. ಇದರಿಂದ ಸಿಂಧು ಸುಲಭವಾಗಿ ಪಾಯಿಂಟ್ಗಳನ್ನು ಪಡೆದುಕೊಂಡರು. 7- 4 ಅಂತರದಿಂದ ಕೊನೆಯಲ್ಲಿ 18-14ಕ್ಕೆ ತಲುಪಿತು. ಈ ವೇಳೆ, ಸಿಂಧು ಒಂದು ಪಾಯಿಂಟ್ ಮಾತ್ರ ಬಿಟ್ಟುಕೊಟ್ಟು 21-15ರ ಅಂತರದಲ್ಲಿ ಮೊದಲ ಸೆಟ್ ತಮ್ಮದಾಗಿಸಿಕೊಂಡರು.
ಬಳಿಕ 2ನೇ ಸೆಟ್ನಲ್ಲಿ 24 ವರ್ಷದ ಜಪಾನ್ನ ಕವಾಕಮಿಯ ಆಟ ಸಿಂಧು ಕೆಚ್ಚೆದೆಯ ಹೋರಾಟದ ಮುಂದೆ ಮತ್ತಷ್ಟು ದುರ್ಬಲವಾಯಿತು. ಆರಂಭದಲ್ಲಿಯೇ 0-5 ರಿಂದ ಮುನ್ನಡೆ ಪಡೆದ ಸಿಂಧು ಅಂತರವನ್ನು ಹಿಗ್ಗ್ಗಿಸುತ್ತಾ ಹೋದರು.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ.. ಯಾರಿಗೆಲ್ಲಾ ಸ್ಥಾನ?
ಆಟದ ಮಧ್ಯಂತರದಲ್ಲಿ 11-4 ರ ಮುನ್ನಡೆ ಸಾಧಿಸಿದ ಸಿಂಧು ಕೊನೆಯಲ್ಲಿ 19-6 ರಲ್ಲಿ ಪಾರಮ್ಯ ಮೆರೆದರು. ಪಂದ್ಯ ಗೆಲ್ಲಲು 2 ಪಾಯಿಂಟ್ ಇದ್ದಾಗ ಫೋರ್ಹ್ಯಾಂಡ್ ಮತ್ತು ಬ್ಯಾಕ್ಹ್ಯಾಂಡ್ ಅಟ್ಯಾಕ್ ಪ್ರಯೋಗಿಸಿ ಪಾಯಿಂಟ್ ಪಡೆದು ಪಂದ್ಯವನ್ನು ಗೆದ್ದು ಫೈನಲ್ ತಲುಪಿದರು.