ಹ್ಯಾಂಗ್‌ಝೌ:ಬುಧವಾರ ಇಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 50 ಮೀಟರ್ ರೈಫಲ್ ತ್ರೀ ಪೊಸಿಷನ್ಸ್ (3ಪಿ) ಸ್ಪರ್ಧೆಯ ವೈಯಕ್ತಿಕ ಫೈನಲ್‌ನಲ್ಲಿ ಭಾರತದ ಶೂಟರ್‌ಗಳಾದ ಸಿಫ್ಟ್ ಕೌರ್ ಸಮ್ರಾ ಅವರು ವಿಶ್ವದಾಖಲೆಯ ಚಿನ್ನದ ಪದಕ ಗೆದ್ದರೆ, ಆಶಿ ಚೌಕ್ಸೆ ಕಂಚಿಗೆ ತೃಪ್ತಿಪಟ್ಟರು. ಮತ್ತೊಂದೆಡೆ, ಏಷ್ಯನ್ ಗೇಮ್ಸ್ನಲ್ಲಿನ ಪುರುಷರ ಡಿಂಗಿ ಐಎಲ್‌ಸಿಎ7 ಸ್ಪರ್ಧೆಯಲ್ಲಿ ನಾವಿಕ ವಿಷ್ಣು ಸರ್ವಣನ್ ಕಂಚಿನ ಪದಕ ಸಾಧನೆ ಮಾಡಿದರು.
50 ಮೀಟರ್ ರೈಫಲ್ ತ್ರೀ ಪೊಸಿಷನ್ಸ್ (3ಪಿ) ಸ್ಪರ್ಧೆಯಲ್ಲಿ 469.6 ಅಂಕಗಳನ್ನು ಗಳಿಸುವ ಮೂಲಕ ಸಿಫ್ಟ್ ಚಿನ್ನ ಪದಕ ತನ್ನದಾಗಿಸಿಕೊಂಡಿದ್ದಾರೆ. ಪಟ್ಟಿಯಲ್ಲಿ ಅಗ್ರಸ್ಥಾನದ ಜೊತೆಗೆ ವಿಶ್ವ ದಾಖಲೆ, ಏಷ್ಯನ್ ದಾಖಲೆ ಮತ್ತು ಏಷ್ಯನ್ ಗೇಮ್ಸ್ ದಾಖಲೆ ಮುರಿದರು. ಈ ಹಿಂದೆ, ವಿಶ್ವ ದಾಖಲೆಯನ್ನು ಗ್ರೇಟ್ ಬ್ರಿಟನ್ ಹೊಂದಿತ್ತು. ಏಷ್ಯನ್ ದಾಖಲೆ ಚೀನಾ ಮತ್ತು ಏಷ್ಯನ್ ಗೇಮ್ಸ್ ದಾಖಲೆಯನ್ನು ಮಂಗೋಲಿಯಾ ಹೆಸರಿನಲ್ಲಿತ್ತು.
462.3 ಅಂಕಗಳೊಂದಿಗೆ ಚೀನಾದ ಕಿಯೊಂಗ್ಯು ಜಾಂಗ್ ಬೆಳ್ಳಿ ಪದಕ ಮತ್ತು 451.9 ಅಂಕಗಳೊಂದಿಗೆ ಆಶಿ ಕಂಚಿನ ಪದಕ ಮುಡಿಗೇರಿಸಿಕೊಂಡರು. ಇದರೊಂದಿಗೆ ಭಾರತವು ಪ್ರಸ್ತುತ ಶೂಟಿಂಗ್‌ನಲ್ಲಿ 9ನೇ ಪದಕ ಗಳಿಸಿದೆ. ಒಟ್ಟಾರೆ ಐದನೇ ಚಿನ್ನದ ಪದಕ ಪಡೆದಿದೆ.
ಭಾರತಕ್ಕೆ ಕೀರ್ತಿ ತಂದ ಕ್ರೀಡಾಪಟುಗಳು:ಇಂದು (ಬುಧವಾರ), ಭಾರತದ ಮಹಿಳಾ ಶೂಟಿಂಗ್ ತಂಡದ ಮೂವರಾದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದರು. ಈ ಮೂಲಕ ಶೂಟಿಂಗ್‌ನಲ್ಲಿ ದೇಶದ ಪ್ರಾಬಲ್ಯವನ್ನು ಮುಂದುವರೆಸಿದರು. ಭಾರತ ಒಟ್ಟು 1,759 ಅಂಕ ಗಳಿಸಿ, ಚಿನ್ನಕ್ಕೆ ಕೊರಳೊಡ್ಡಿತು. 1,756 ಅಂಕಗಳೊಂದಿಗೆ ಚೀನಾ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿತು. ದಕ್ಷಿಣ ಕೊರಿಯಾ ಒಟ್ಟು 1,742 ಅಂಕಗಳೊಂದಿಗೆ ಕಂಚು ಪಡೆಯಿತು.
ಇದಕ್ಕೂ ಮುನ್ನ, ಪುರುಷರ 10 ಮೀಟರ್ ಏರ್ ರೈಫಲ್ ತಂಡದಲ್ಲಿ ದಿವ್ಯಾಂಶ್ ಸಿಂಗ್ ಪನ್ವಾರ್, ರುದ್ರಂಕ್ಷ್ ಪಾಟೀಲ್, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ತಂಡ ವಿಶ್ವದಾಖಲೆಯ ಚಿನ್ನ ಗೆದ್ದುಕೊಂಡಿತ್ತು. ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡದಲ್ಲಿ ಮೆಹುಲಿ ಘೋಷ್, ರಮಿತಾ ಜಿಂದಾಲ್ ಮತ್ತು ಆಶಿ ಚೌಕ್ಸೆ ಬೆಳ್ಳಿ ಪದಕ ಪಡೆದರು.
ಈವರೆಗೆ ಭಾರತದ ಮುಡಿಗೇರಿದ 18 ಪದಕಗಳು:ಮಹಿಳೆಯರ 10 ಮೀ ಏರ್ ರೈಫಲ್ ವೈಯಕ್ತಿಕ ಸ್ಪರ್ಧೆಯಲ್ಲಿ ರಮಿತಾ ಕಂಚಿನ ಪದಕವನ್ನು ಪಡೆದರು. ಪುರುಷರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಐಶ್ವರಿ ಕಂಚು ಗೆದ್ದಿದ್ದಾರೆ. ಪುರುಷರ 25 ಮೀ ರ್ಯಾಪಿಡ್-ಫೈರ್ ಪಿಸ್ತೂಲ್ನಲ್ಲಿ ಆದರ್ಶ್ ಸಿಂಗ್, ವಿಜಯವೀರ್ ಸಿಧು ಮತ್ತು ಅನೀಶ್ ಭನ್ವಾಲಾ ಅವರು ಕಂಚಿನ ಪದಕ ಪಡೆದರು. ಈಗ ನಡೆಯುತ್ತಿರುವ ಹ್ಯಾಂಗ್‌ಝೌ ಕೂಟದಲ್ಲಿ ಭಾರತ ಐದು ಚಿನ್ನ, ಐದು ಬೆಳ್ಳಿ ಮತ್ತು ಎಂಟು ಕಂಚಿನ ಪದಕಗಳೊಂದಿಗೆ ಒಟ್ಟು 18 ಪದಕಗಳನ್ನು ಗಳಿಸಿಕೊಂಡಿದೆ.
ಇದನ್ನೂ ಓದಿ:ಏಷ್ಯನ್ ಗೇಮ್ಸ್: 25 ಮೀಟರ್ ರೈಫಲ್ನಲ್ಲಿ ಭಾರತದ ವನಿತೆಯರಿಗೆ ಚಿನ್ನ!