ನಳಂದ (ಬಿಹಾರ): ರಗ್ಬಿ ಆಟದಲ್ಲಿ ಬಿಹಾರದ ಶ್ವೇತಾ ಶಾಹಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬಿಹಾರದಲ್ಲಿ ರಗ್ಬಿ ಗರ್ಲ್ ಎಂದೇ ಹೆಸರು ಮಾಡಿರುವ 23 ವರ್ಷದ ಈ ಸಾಧಕಿ, ಚೆನ್ನೈನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ರೈತ ಕುಟುಂಬದ ಈ ಪಟು ತಮ್ಮ ಪರಿಶ್ರಮದಿಂದ ದೊಡ್ಡ ಸಾಧನೆ ಮಾಡಿ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ.
ಶ್ವೇತಾ ಶಾಹಿ ಅವರು ಮೂಲತಃ ನಳಂದ ಜಿಲ್ಲೆಯ ಸಿಲಾವ್ ಬ್ಲಾಕ್‌ನ ಭದರಿ ಗ್ರಾಮದ ನಿವಾಸಿ ರೈತ ಸುಜಿತ್ ಕುಮಾರ್ ಶಾಹಿ ಅವರ ಪುತ್ರಿ. ಮಧ್ಯಮ ವರ್ಗದ ಕುಟುಂಬದ ಸುಜಿತ್ ಕುಮಾರ್ ಅವರಿಗೆ ಇಬ್ಬರು ಪುತ್ರಿಯರು ಮತ್ತು ಮೂವರು ಪುತ್ರರು ಸೇರಿದಂತೆ 5 ಮಕ್ಕಳಿದ್ದಾರೆ. ಈ ಪೈಕಿ ಶ್ವೇತಾ ಶಾಹಿ ಎರಡನೇ ಮಗಳು.
ಕ್ರೀಡೆಯಲ್ಲಿ ಶ್ವೇತಾ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಕ್ರಮೇಣವಾಗಿ ಬ್ಲಾಕ್‌ನಿಂದ ಜಿಲ್ಲಾ ಮಟ್ಟ, ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದವರು. ಅಥ್ಲೀಟ್‌ನಲ್ಲಿ 2010ರಿಂದ 2012ರವರೆಗೆ ರಾಜ್ಯ ಮಟ್ಟದ ಕ್ರೀಡಾಪಟುವಾಗಿ ಆಡಿದ್ದಾರೆ. 2013ರಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಿಹಾರದ ಮುಜಾಫರ್‌ಪುರಕ್ಕೆ ಹೋಗಿದ್ದರು. ಅದೇ ಸಮಯದಲ್ಲಿ ಬಿಹಾರ ರಗ್ಬಿ ಅಸೋಸಿಯೇಶನ್‌ನ ಕಾರ್ಯದರ್ಶಿ ಪಂಕಜ್ ಕುಮಾರ್ ಜ್ಯೋತಿ ಅವರನ್ನು ಭೇಟಿಯಾಗಿದ್ದರು. ಅಲ್ಲಿಂದ ರಗ್ಬಿ ಆಟದತ್ತ ಶ್ವೇತಾ ಅವರ ಚಿತ್ತ ಬೆಳೆಯಿತು.
ರಗ್ಬಿ ಆಡಲು ಆಫರ್:ಮುಜಾಫರ್‌ಪುರದಲ್ಲಿ ಭೇಟಿಯಾದ ಬಿಹಾರದ ರಗ್ಬಿ ಕಾರ್ಯದರ್ಶಿ ಪಂಕಜ್ ಕುಮಾರ್ ಅವರು ಒಲಿಂಪಿಕ್ಸ್‌ನಲ್ಲಿ ರಗ್ಬಿ ಆಟದಲ್ಲಿ ಭಾಗವಹಿಸುವಂತೆ ಶ್ವೇತಾ ಅವರಿಗೆ ಸಲಹೆ ನೀಡಿದರು. ರಗ್ಬಿ ಟ್ರಯಲ್ ಭುವನೇಶ್ವರದಲ್ಲಿ ನಡೆಯಬೇಕಿತ್ತು. ರಗ್ಬಿ ಆಡಲು ಶ್ವೇತಾ ಒಪ್ಪಿದಾಗ ಪಾಟ್ನಾಗೆ ಅವರನ್ನು ಪಂಕಜ್ ಕುಮಾರ್ ಕರೆಸಿಕೊಂಡರು. ಎರಡು ದಿನಗಳ ತರಬೇತಿ ಬಳಿಕ ಭುವನೇಶ್ವರಕ್ಕೆ ಕರೆದೊಯ್ದರು. ಅಲ್ಲಿ ರಗ್ಬಿ ಇಂಡಿಯಾದ ಮ್ಯಾನೇಜರ್ ನಾಸಿರ್ ಹುಸೇನ್ ಅವರನ್ನು ಭೇಟಿಯಾದರು. ಅಲ್ಲದೇ, ತರಬೇತಿ ಪೂರ್ಣಗೊಳಿಸಿದ ಬಳಿಕ ರಗ್ಬಿ ಆಟವನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಅಭ್ಯಾಸದಲ್ಲಿ ಶ್ವೇತಾ ತೊಡಗಿದರು.