ನವದೆಹಲಿ:ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಂದರ್ಭದಲ್ಲಿ ಪಿವಿ ಸಿಂಧು ಅವರಿಗೆ ಕೋಚ್ ಆಗಿದ್ದ ಕೊರಿಯಾದ ಪಾರ್ಕ್ ಟೇ-ಸಾಂಗ್, ತಮ್ಮ ದೇಶಕ್ಕೆ ಮರಳಿ ಹೋಗುತ್ತಿರುವುದರಿಂದ ಸಿಂಧು ಅವರಿಂದ ದೂರವಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. 2024ರ ಪ್ಯಾರಿಸ್ ಒಲಂಪಿಕ್ಗೆ ಸಿಂಧುಗೆ ಕೋಚಿಂಗ್ ಮಾಡಲಾಗುತ್ತಿಲ್ಲ ಎಂದಿದ್ದಾರೆ.
ಸಿಂಧು ಇನ್ನು ಹೈದರಾಬಾದ್‌ನ ಸುಚಿತ್ರಾ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಮಲೇಷ್ಯಾದ ಮುಹಮ್ಮದ್ ಹಫೀಜ್ ಹಶೀಮ್ ಅವರೊಂದಿಗೆ ತರಬೇತಿ ಪಡೆಯಲಿದ್ದಾರೆ. 2003 ರಲ್ಲಿ ಆಲ್ ಇಂಗ್ಲೆಂಡ್ ಪ್ರಶಸ್ತಿಯನ್ನು ಗೆದ್ದಿದ್ದ ಹಫೀಜ್, ಹೈದರಾಬಾದ್ ಮೂಲದ ಅಕಾಡೆಮಿಯೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಮತ್ತು ಅಲ್ಲಿ ಪುರುಷ ಮತ್ತು ಮಹಿಳಾ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಆರಂಭದಲ್ಲಿ ಸುಚಿತ್ರಾ ಬ್ಯಾಡ್ಮಿಂಟನ್ ಅಕಾಡೆಮಿಯಿಂದ ಸಿಂಧು ಅವರು ತರಬೇತಿ ಪಡೆದಿದ್ದು, ವಾರದಲ್ಲಿ ಒಂದು ಅಥವಾ ಎರಡು ದಿನ ಅಲ್ಲಿ ಅಭ್ಯಾಸ ಮಾಡಲಿದ್ದಾರೆ.
ಕಳೆದ ವರ್ಷ ಸಿಂಧು ಅವರು ಸೈಯದ್ ಮೋದಿ ಇಂಟರ್‌ನ್ಯಾಷನಲ್, ಸ್ವಿಸ್ ಓಪನ್ ಮತ್ತು ಸಿಂಗಾಪುರ್ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡರು. ಅಲ್ಲದೇ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಮಹಿಳೆಯರ ಸಿಂಗಲ್ಸ್ ಚಿನ್ನವನ್ನು ಗೆದ್ದರು, ಇದು ಅವರ ಮೊದಲ CWG ಪ್ರಶಸ್ತಿಯಾಗಿದೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ನ ಪ್ರಕಾರ ಪಿವಿ ಸಿಂಧು ಅವರ ಅತ್ಯುತ್ತಮ ವರ್ಲ್ಡ್ ಟೂರ್ ಸೀಸನ್ ಕಳೆದ ವರ್ಷದ್ದಾಗಿತ್ತು. ಆಗಸ್ಟ್‌ನಲ್ಲಿ ಸಿಂಧು ಅವರ ಎಡ ಪಾದದಲ್ಲಿ ಉಳುಕಿಗೆ ಕಾರಣವಾಗಿತ್ತು. ಇದರಿಂದ 5 ತಿಂಗಳ ಕಾಲ ಸ್ಪರ್ಧೆಗಳಿಂದ ಹೊರಗುಳಿದಿದ್ದರು. ಪ್ರಸ್ತುತ ಮಹಿಳಾ ಸಿಂಗಲ್ಸ್ ಆಟಗಾರರ ವಿಶ್ವ ರ್‍ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.
ಮಾರ್ಚ್ 14 ರಿಂದ 19 ರವರೆಗೆ ನಡೆಯಲಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಸಿದ್ಧರಾಗಲು ಸಿಂಧುಗೆ ಹಫೀಜ್ ಹಾಶಿಮ್ ಅವರಿಂದ ಕೋಚಿಂಗ್ ಪಡೆಯಲಿದ್ದಾರೆ. ಈ ಬಗ್ಗೆ ಪಿವಿ ಸಿಂಧು ಯಾವುದೇ ರೀತಿ ಹೇಳಿಕೆ ನೀಡಿಲ್ಲ. ಪಾರ್ಕ್ ಟೇ-ಸಾಂಗ್ ಇನ್ಸ್ಟಾಗ್ರಾಂನಲ್ಲಿ ತಮ್ಮ ನಿಲುವನ್ನು ಹೇಳಿದ್ದಾರೆ. ಫಾರ್ಮ್‌ನಲ್ಲಿನ ಕುಸಿತ ಮತ್ತು ಬಿಡಬ್ಲ್ಯೂಎಫ್ ಶ್ರೇಯಾಂಕದ ಸಿಂಧು ಅವರ ಕಳಪೆ ಪ್ರದರ್ಶನದ ಕಾರಣ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.